ಮತ್ತೆ ಬರಲಿದೆಯೇ Orkut? ಹಳೆಯ ನೆನಪುಗಳಿಗೆ ಜೀವ ತುಂಬಲು ಸಂಸ್ಥಾಪಕರಿಂದ ಹೊಸ ಪ್ರಯತ್ನ
ಬೆಂಗಳೂರು: ಒಂದು ಕಾಲದಲ್ಲಿ ಭಾರತೀಯ ಯುವಜನರ ನೆಚ್ಚಿನ ಸಾಮಾಜಿಕ ಜಾಲತಾಣವಾಗಿದ್ದ ಆರ್ಕುಟ್ (Orkut) ಮತ್ತೆ ಸುದ್ದಿಯಲ್ಲಿದೆ. ಸ್ನೇಹ, ಸಮುದಾಯ ಮತ್ತು ನೈಜ ಮಾನವ ಸಂಬಂಧಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಆರ್ಕುಟ್ ಅನ್ನು ಮರಳಿ ತರಲು ಸಂಸ್ಥಾಪಕ ಓರ್ಕುಟ್ ಬುಯುಕ್ಕೊಕ್ಟೆನ್ (Orkut Büyükkökten) ಸಾರ್ವಜನಿಕರ ಬೆಂಬಲ ಕೋರಿದ್ದಾರೆ. ಈ ಬೆಳವಣಿಗೆಯು ಹಳೆಯ ಆರ್ಕುಟ್ ಬಳಕೆದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಆರ್ಕುಟ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಸಂದೇಶದಲ್ಲಿ, ಇಂಟರ್ನೆಟ್ ಜನರನ್ನು ಪರಸ್ಪರ ಸಂಪರ್ಕಿಸುವ, ಸ್ನೇಹ ಬೆಳೆಸುವ ಮತ್ತು ಸಮುದಾಯದ ಭಾಗವಾಗುವ ವೇದಿಕೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ. ಈ ಉದ್ದೇಶದೊಂದಿಗೆ ಆರ್ಕುಟ್ ಅನ್ನು ಮರಳಿ ತರಲು ಆಸಕ್ತರು orkut.com ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ನೋಂದಣಿ ಬಳಿಕ ದೊರೆಯುವ ಬೆಂಬಲಿಗರ ಕಾರ್ಡ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತೆಯೂ ತಿಳಿಸಲಾಗಿದೆ.
2004ರಲ್ಲಿ ಆರಂಭವಾಗಿದ್ದ ಆರ್ಕುಟ್, ಭಾರತ ಮತ್ತು ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು. ಸ್ನೇಹಿತರ ಪ್ರೊಫೈಲ್‌ಗಳು, ಸ್ಕ್ರ್ಯಾಪ್‌ಗಳು, ಟೆಸ್ಟಿಮೋನಿಯಲ್‌ಗಳು ಹಾಗೂ ಆಸಕ್ತಿಗೆ ಅನುಗುಣವಾದ ಸಮುದಾಯಗಳು ಈ ವೇದಿಕೆಯ ಪ್ರಮುಖ ಆಕರ್ಷಣೆಗಳಾಗಿದ್ದವು. ಬಳಿಕ ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಬೆಳವಣಿಗೆಯ ನಡುವೆ ಗೂಗಲ್ 2014ರ ಸೆಪ್ಟೆಂಬರ್ 30ರಂದು ಆರ್ಕುಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಗಮನ ಸೆಳೆಯುವ ಅಲ್ಗಾರಿದಮ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾಗುವ ವಿಷಯಗಳ ನಡುವೆ ನೈಜ ಸಂಪರ್ಕಗಳಿಗೆ ಹೆಚ್ಚಿನ ಮಹತ್ವ ನೀಡಬೇಕೆಂಬ ಆಶಯವೂ ಈ ಹೊಸ ಪ್ರಯತ್ನದ ಹಿಂದಿದೆ. ಸ್ನೇಹಿತರನ್ನು ಮತ್ತೆ ಹುಡುಕಲು ಮತ್ತು ಅರ್ಥಪೂರ್ಣ ಸಮುದಾಯಗಳೊಂದಿಗೆ ಬೆರೆಯಲು ಅವಕಾಶ ಕಲ್ಪಿಸುವ ವೇದಿಕೆಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ.
ಆದರೆ ಆರ್ಕುಟ್‌ನ ಮರುಪ್ರಾರಂಭದ ಅಧಿಕೃತ ದಿನಾಂಕ, ಹೊಸ ವೇದಿಕೆಯ ವೈಶಿಷ್ಟ್ಯಗಳು ಹಾಗೂ ಸೇವೆ ಆರಂಭಿಸುವ ವಿಧಾನಗಳ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಪ್ರಕಟವಾಗಿಲ್ಲ. ಪ್ರಸ್ತುತ ನಡೆಯುತ್ತಿರುವುದು ಹೊಸ ವೇದಿಕೆಗೆ ಬೆಂಬಲ ಸಂಗ್ರಹಿಸುವ ಅಭಿಯಾನವಾಗಿದ್ದು, ಹೆಸರು ನೋಂದಾಯಿಸಿಕೊಂಡ ಮಾತ್ರಕ್ಕೆ ಹೊಸ ಖಾತೆ ಖಚಿತವಾಗುವುದಿಲ್ಲ.
ಒಟ್ಟಿನಲ್ಲಿ, ಒಂದು ಕಾಲದ ಡಿಜಿಟಲ್ ಸ್ನೇಹದ ನೆನಪಾಗಿರುವ ಆರ್ಕುಟ್ ಮತ್ತೆ ಮರಳುವ ಸಾಧ್ಯತೆಯ ಕುರಿತು ಚರ್ಚೆ ಆರಂಭವಾಗಿದೆ. ಈ ಪ್ರಯತ್ನ ಹೊಸ ಸಾಮಾಜಿಕ ಜಾಲತಾಣವಾಗಿ ರೂಪುಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನೀವೂ ಒರ್ಕುಟ್ ಅಭಿಮಾನಿಯೇ? ಹೀಗೆ ಬೆಂಬಲ ಸೂಚಿಸಿ
ನಿಮಗೂ ಒರ್ಕುಟ್ ದಿನಗಳ ನೆನಪಿದ್ದರೆ ಮತ್ತು ಅದು ಮತ್ತೆ ಮರಳಿ ಬರಬೇಕೆಂದು ನಿಮಗನಿಸಿದರೆ, ನೀವು ಭಾರತದಿಂದಲೇ ನಿಮ್ಮ ಬೆಂಬಲವನ್ನು ದಾಖಲಿಸಬಹುದು!
ನಿಮ್ಮ ನೋಂದಣಿ ಪೂರ್ಣಗೊಂಡ ತಕ್ಷಣ, ನಿಮಗಾಗಿಯೇ ಸಿದ್ಧವಾಗುವ ವಿಶೇಷ ‘ಡಿಜಿಟಲ್ ಸಪೋರ್ಟರ್ ಕಾರ್ಡ್’ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಹಳೆಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
- ಮೊದಲು Orkut.com ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಿಮ್ಮ ಹೆಸರು, ಇಮೇಲ್ ಐಡಿ ನಮೂದಿಸಿ ಮತ್ತು ‘Country’ ಜಾಗದಲ್ಲಿ India ಆಯ್ಕೆ ಮಾಡಿ.
- ನಿಮ್ಮ ನೋಂದಣಿ ಪೂರ್ಣಗೊಂಡ ತಕ್ಷಣ, ನಿಮಗಾಗಿಯೇ ಸಿದ್ಧವಾಗುವ ವಿಶೇಷ ‘ಡಿಜಿಟಲ್ ಸಪೋರ್ಟರ್ ಕಾರ್ಡ್’ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಹಳೆಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!





















