SK Home Ad
Home ಸುದ್ದಿ ರಾಜ್ಯ ಏಳು-ಬೀಳುಗಳ ನಡುವೆಯೂ ಸಚಿವ ಸ್ಥಾನ ಪಡೆದ ಲಕ್ಷ್ಮಣ ಸವದಿ

ಏಳು-ಬೀಳುಗಳ ನಡುವೆಯೂ ಸಚಿವ ಸ್ಥಾನ ಪಡೆದ ಲಕ್ಷ್ಮಣ ಸವದಿ

0
38

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರು ಸೋಮವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಯಾಗಿರುವ ಸವದಿ, ಸಹಕಾರ, ಸಾರಿಗೆ ಹಾಗೂ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

1960ರ ಫೆಬ್ರವರಿ 16ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನಾಗನೂರು ಪಿ.ಕೆ. ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಲಕ್ಷ್ಮಣ ಸಂಗಪ್ಪ ಸವದಿ ಅವರು 1978ರಲ್ಲಿ ಅಥಣಿಯ ಎಸ್‌ಎಸ್‌ಎಂಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದರು. ಕೃಷಿ ಮತ್ತು ಸಮಾಜಸೇವೆಯ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟ ಅವರು ನಂತರ ಸಕ್ರಿಯ ರಾಜಕೀಯ ಪ್ರವೇಶಿಸಿದರು.

2004ರಲ್ಲಿ ಬಿಜೆಪಿಯಿಂದ ಅಥಣಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಸವದಿ, 2008 ಮತ್ತು 2013ರಲ್ಲೂ ಗೆಲುವು ಸಾಧಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದರು.

2008ರಿಂದ 2012ರವರೆಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಡಿ.ವಿ. ಸದಾನಂದಗೌಡ ನೇತೃತ್ವದ ಸರ್ಕಾರಗಳಲ್ಲಿ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು, ಬಳಿಕ ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. 2019ರ ಆಗಸ್ಟ್ 20ರಿಂದ 2021ರ ಜುಲೈ 28ರವರೆಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. 2020ರ ಫೆಬ್ರವರಿ 17ರಂದು ಶಾಸಕರಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ 2023ರ ಏಪ್ರಿಲ್ 14ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸವದಿ, ಅದೇ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ 1,31,404 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ 76,122 ಮತಗಳ ಅಂತರದಿಂದ ಜಯಗಳಿಸಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದರು.

ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡಿರುವ ಲಕ್ಷ್ಮಣ ಸವದಿ ಅವರು ಬೆಳಗಾವಿ ಜಿಲ್ಲೆಯ ಸಹಕಾರ ಹಾಗೂ ಕೃಷಿ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿದ್ದಾರೆ. ಇದೀಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯ ಆಡಳಿತದಲ್ಲಿ ಮತ್ತೊಮ್ಮೆ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.