SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಪರಿಶೀಲಿಸಿ ವರದಿ ನೀಡಲು ನೂತನ ಸಚಿವರಿಗೆ ಸಿಎಂ ಸೂಚನೆ

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಪರಿಶೀಲಿಸಿ ವರದಿ ನೀಡಲು ನೂತನ ಸಚಿವರಿಗೆ ಸಿಎಂ ಸೂಚನೆ

0
8

ಬೆಂಗಳೂರು: “ಬುಧವಾರದಿಂದಲೇ ನೂತನ ಸಚಿವರುಗಳು ತಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಅಲ್ಲಿನ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಮುಂದಿರುವ ಸವಾಲು, ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಹಾಗೂ ಕಾವೇರಿ ಭಾಗದ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ತಾತ್ಕಾಲಿಕವಾಗಿ ಮಳೆಯಿಂದ ಸಮಸ್ಯೆ ನಿವಾರಣೆಯಾಗಿರಬಹುದು. ಭೀಕರವಾದ ಕಂಟಕ ಎದುರಾಗಿತ್ತು. ದೇವರ ಕೃಪೆಯಿಂದ ಇದು ಸದ್ಯಕ್ಕೆ ನಿವಾರಣೆಯಾಗಿದೆ ಎಂದರು.

ತಮಿಳುನಾಡಿಗೆ 3,50 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದ್ದು, ನಾವು 30 ಸಾವಿರ ಕ್ಯೂಸೆಕ್ ನೀರು ಹರಿಸುವಂತಾಗಿದೆ. ಕೆಆರ್‌ಎಸ್, ಹೇಮಾವತಿ ತುಂಬಿಲ್ಲ, ಒಳಹರಿವು ಹೆಚ್ಚಿದೆ. ಮಲೆನಾಡಿನಲ್ಲಿ ಮಳೆ ಬೀಳುತ್ತಿದ್ದು, ತುಂಗಭದ್ರಾಗೆ ಇನ್ನು ನೀರು ಬರಬೇಕು. ಆಲಮಟ್ಟಿಯಲ್ಲಿ ನೀರಿನ ಹರಿವು ಇದೆ. ಬರಗಾಲದ ಛಾಯೆ ಇನ್ನು ಇದೆ. ಮಳೆಯಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಅನಾಹುತಗಳು ಆಗಿವೆ. ನಾನು ವರದಿ ತರಿಸಿಕೊಂಡು ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲಿಸಿ: “ಸಚಿವ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಂದ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ನಾಳೆ ಒಂದು ದಿನ ಹೊರತುಪಡಿಸಿ ನಾಡಿದ್ದಿನಿಂದ ನೀವುಗಳು ನಿಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ನೀಡಬೇಕು. ವಿರೋಧ ಪಕ್ಷದ ನಾಯಕರು ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಕಂದಾಯ ಸಚಿವರಾಗಿದ್ದವರು. ಸಾಕಷ್ಟು ಅನುಭವಸ್ಥರು. ಅವರಿಗೆ ಸಮಯ ಬಂದಾಗ ಉತ್ತರ ನೀಡೋಣ. ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರ್ಗಿ ವಿಭಾಗಗಳಲ್ಲಿ ಸಭೆ ಮಾಡಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ಮಾಡಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ವಿಧಾನಸಭೆಗೆ 1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ವರದಿ ನೀಡಬೇಕು. ನಂತರ ಸರ್ಕಾರ ತೀರ್ಮಾನ ಮಾಡಲಿದೆ. ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.