SK Home Ad
Home ಸುದ್ದಿ ರಾಜ್ಯ ದಾಳಿಂಬೆ ಹಣ್ಣಿನ ಉಡುಗೊರೆಯ ಹಿಂದಿನ ಕಥೆ – ವ್ಯಥೆ ಹಂಚಿಕೊಂಡ ಸಚಿವ ಎಂ.ಬಿ. ಪಾಟೀಲ

ದಾಳಿಂಬೆ ಹಣ್ಣಿನ ಉಡುಗೊರೆಯ ಹಿಂದಿನ ಕಥೆ – ವ್ಯಥೆ ಹಂಚಿಕೊಂಡ ಸಚಿವ ಎಂ.ಬಿ. ಪಾಟೀಲ

0
83
65 ಎಕರೆ ಬರಡು ಭೂಮಿಯಿಂದ ಸಮೃದ್ಧ ತೋಟದವರೆಗೆ; ದಾಳಿಂಬೆ ಬುಟ್ಟಿಯೊಂದಿಗೆ ಬಂದ ರೈತನ ಕೃತಜ್ಞತೆ

ಒಂದು ಕಾಲದಲ್ಲಿ ಜಮೀನು ಮಾರಿದ ಕುಟುಂಬ, ಇಂದು ಹೊಸ ಜಮೀನು ಖರೀದಿಸಿ ಸಮೃದ್ಧ ಬದುಕು ಕಟ್ಟಿಕೊಂಡಿದ್ದು – ದಾಳಿಂಬೆ ಬುಟ್ಟಿಯೊಂದಿಗೆ ಬಂದ ರೈತನ ಕೃತಜ್ಞತೆಯನ್ನು ಹಂಚಿಕೊಂಡ ಸಚಿವರು

ವಿಜಯಪುರ: ಬರ, ನೀರಿನ ಕೊರತೆ, ಸಾಲದ ಹೊರೆ ಮತ್ತು ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗಿದ್ದ ರೈತ ಕುಟುಂಬವೊಂದು ನೀರಾವರಿ ಸೌಲಭ್ಯ ಹಾಗೂ ಸತತ ಪರಿಶ್ರಮದ ಮೂಲಕ ಕೃಷಿಯಲ್ಲಿ ಹೊಸ ಬದುಕು ಕಟ್ಟಿಕೊಂಡಿರುವ ಘಟನೆ ಗಮನ ಸೆಳೆದಿದೆ. ಮುಳವಾಡದ ಪಾಂಡು ಜಾಧವ್ ಹಾಗೂ ಅವರ ಕುಟುಂಬದ ಈ ಪಯಣವನ್ನು ಸಚಿವ ಎಂ.ಬಿ. ಪಾಟೀಲ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಒಂದು ಕಾಲದಲ್ಲಿ 65 ಎಕರೆ ಜಮೀನು ಇದ್ದರೂ ನೀರಿನ ಕೊರತೆಯಿಂದ ಕೃಷಿ ಮಾಡುವುದು ಕಷ್ಟವಾಗಿತ್ತು ಎಂದು ಕುಟುಂಬದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಬರದ ಪರಿಣಾಮ ಜೀವನೋಪಾಯಕ್ಕಾಗಿ ಪಾಂಡು ಜಾಧವ್ ಹಾಗೂ ಅವರ ಸಹೋದರ ಖೇಮು ಮಹಾರಾಷ್ಟ್ರಕ್ಕೆ ಕೂಲಿ ಕಾರ್ಮಿಕರನ್ನು ಕಳುಹಿಸುವ ಗುತ್ತಿಗೆ ಕೆಲಸ ಮಾಡಬೇಕಾದ ಪರಿಸ್ಥಿತಿಯೂ ಎದುರಾಗಿತ್ತು.

ಇದರ ನಡುವೆ ಪಾಂಡು ಜಾಧವ್ ಅವರಿಗೆ ಬ್ರೇನ್ ಟ್ಯೂಮರ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಸೇರಿದಂತೆ ಕುಟುಂಬದ ಮೇಲೆ ಭಾರೀ ಆರ್ಥಿಕ ಹೊರೆ ಬಿದ್ದಿತ್ತು. ಸಾಲ ತೀರಿಸಲು ಪಿತ್ರಾರ್ಜಿತ ಆಸ್ತಿಯ 6 ಎಕರೆ ಜಮೀನನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಎಂ.ಬಿ. ಪಾಟೀಲ ಅವರ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ನಂತರ ನೀರಾವರಿ ಸೌಲಭ್ಯ ದೊರೆತ ಹಿನ್ನೆಲೆಯಲ್ಲಿ ಕುಟುಂಬವು ಬರಡು ಭೂಮಿಯನ್ನು ಕೃಷಿಗೆ ಯೋಗ್ಯವಾಗಿಸುವತ್ತ ಗಮನಹರಿಸಿತು. ಅಣ್ಣ-ತಮ್ಮಂದಿರು ಕಲ್ಲು-ಮಣ್ಣಿನ ಗುಡ್ಡಗಳನ್ನು ತೆರವುಗೊಳಿಸಿ, ಕಠಿಣ ಪರಿಶ್ರಮದ ಮೂಲಕ ಕೃಷಿಭೂಮಿಯನ್ನು ಅಭಿವೃದ್ಧಿಪಡಿಸಿದರು. ಇದರ ಫಲವಾಗಿ ಇದೀಗ 15 ಎಕರೆ ದ್ರಾಕ್ಷಿ, 15 ಎಕರೆ ಮೆಕ್ಕೆಜೋಳ ಮತ್ತು 5 ಎಕರೆ ದಾಳಿಂಬೆ ಬೆಳೆ ಬೆಳೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಪಾಂಡು ಜಾಧವ್ ಹಾಗೂ ಕುಟುಂಬ ವಿಜಯಪುರದಲ್ಲಿರುವ ಎಂ.ಬಿ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ತೋಟದಲ್ಲಿ ಬೆಳೆದ ದಾಳಿಂಬೆ ಹಣ್ಣುಗಳ ಬುಟ್ಟಿಯನ್ನು ಕೃತಜ್ಞತೆಯ ಸಂಕೇತವಾಗಿ ನೀಡಿದ್ದಾರೆ. ಈ ವೇಳೆ ತಮ್ಮ ಹಿಂದಿನ ಸಂಕಷ್ಟಗಳನ್ನು ನೆನಪಿಸಿಕೊಂಡು ಕುಟುಂಬ ಭಾವುಕರಾದದ್ದು ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ.

ಇದೀಗ ಕುಟುಂಬವು ತಮ್ಮ ಸ್ವಗ್ರಾಮದಲ್ಲಿ 5 ಎಕರೆ ಹಾಗೂ ವಿಜಯಪುರದ ಸಮೀಪ 3 ಎಕರೆ ಜಮೀನು ಖರೀದಿಸಿದ್ದು, ತೋಟದಲ್ಲೇ ಮನೆ ನಿರ್ಮಿಸಿಕೊಂಡಿದೆ. ವಿಜಯಪುರದಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಮನೆ ಖರೀದಿಸಿರುವುದಾಗಿ ಹಾಗೂ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರುವುದಾಗಿ ಕುಟುಂಬ ತಿಳಿಸಿದೆ.

ಒಮ್ಮೆ ಬರ ಮತ್ತು ಸಾಲದ ಸಂಕಷ್ಟದಿಂದ ಜಮೀನು ಮಾರಾಟ ಮಾಡಬೇಕಾಗಿದ್ದ ಕುಟುಂಬ, ಇಂದು ಕೃಷಿ ಆದಾಯದ ಮೂಲಕ ಹೊಸ ಆಸ್ತಿಗಳನ್ನು ನಿರ್ಮಿಸಿಕೊಂಡಿರುವುದು ನೀರಾವರಿ, ಪರಿಶ್ರಮ ಮತ್ತು ಕೃಷಿ ವೈವಿಧ್ಯೀಕರಣದಿಂದ ಗ್ರಾಮೀಣ ಕುಟುಂಬಗಳ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ಕಾಣಿಸಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.