SK Home Ad
Home ಸುದ್ದಿ ರಾಜ್ಯ ಕನ್ನಡ ಸಿನಿಮಾ ದಿಗ್ಗಜನಿಗೆ ಕನ್ನಡದಲ್ಲೇ ಅಭಿನಂದಿಸಿದ ಪ್ರಧಾನಿ ಮೋದಿ

ಕನ್ನಡ ಸಿನಿಮಾ ದಿಗ್ಗಜನಿಗೆ ಕನ್ನಡದಲ್ಲೇ ಅಭಿನಂದಿಸಿದ ಪ್ರಧಾನಿ ಮೋದಿ

0
77

ನವದೆಹಲಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕಳೆದ ಹಲವು ದಶಕಗಳಿಂದ ಅನಂತ್ ನಾಗ್ ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯ ಛಾಪು ಮೂಡಿಸಿದೆ ಎಂದು ಹೇಳಿದ್ದಾರೆ.

ಅನಂತ್ ನಾಗ್ ಅವರು ತಾವು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನಿಜಕ್ಕೂ ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಬಹುದಶಕಗಳ ಕಾಲ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಅಭಿನಂದನೆ ಸಲ್ಲಿಸಿದ್ದಾರೆ.