ಬೆಳಗಾವಿ: ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವ್ಯಾಜ್ಯ ಕೊನೆಗೆ ರಕ್ತಸಿಕ್ತ ದುರಂತಕ್ಕೆ ತಿರುಗಿದ್ದು, ತಂದೆ ಹಾಗೂ ಮಗಳು ಬರ್ಬರವಾಗಿ ಹತ್ಯೆಯಾದ ಹೃದಯವಿದ್ರಾವಕ ಘಟನೆ ಚನ್ನಮ್ಮನ ಕಿತ್ತೂರು ಸಮೀಪದ ಅವರಾದಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಗ್ರಾಮದ ರುದ್ರಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಬಸಪ್ಪ ಕುಂದರಗಿ ಸಹೋದರರು. ರುದ್ರಪ್ಪ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಳಿಕ ಧಾರವಾಡದಲ್ಲಿ ನೆಲೆಸಿದ್ದರು. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ನೌಕರಿ ಮಾಡುತ್ತಿದ್ದ ಅವರು, ತಮ್ಮ ಸ್ವಂತ ದುಡಿಮೆಯಿಂದ ಖರೀದಿಸಿದ್ದ ಜಮೀನನ್ನು ಕೆಲ ವರ್ಷಗಳ ಬಳಿಕ ಮಾರಾಟ ಮಾಡಿದ್ದರು.
ಆದರೆ, ಅವರಾದಿ ಗ್ರಾಮದಲ್ಲಿದ್ದ ಹಿರಿಯರಿಂದ ಬಂದ ಮೂಲ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಬಹುಕಾಲದಿಂದ ವ್ಯಾಜ್ಯ ನಡೆಯುತ್ತಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಂತಿಮವಾಗಿ ಆಸ್ತಿಯನ್ನು ಸಮಪಾಲು ಮಾಡುವಂತೆ ತೀರ್ಪು ಬಂದಿತ್ತು ಎನ್ನಲಾಗಿದೆ.
ಹೊಲದಲ್ಲಿದ್ದ ಚಿಕ್ಕ ಮನೆಯ ವಿಚಾರವೂ ಸಹೋದರರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಆ ಮನೆಯ ಉತಾರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ರುದ್ರಪ್ಪ ಅವರು ಸೆ. 3ರಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಿಸಲು ಬಂದಿದ್ದೇ ದುರಂತಕ್ಕೆ ಕಾರಣವಾಯಿತೇ?: ತಾವು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಬಗ್ಗೆ ವಿಚಾರಿಸಲು ರುದ್ರಪ್ಪ ಅವರು ಬುಧವಾರ ತಮ್ಮ ಸ್ನೇಹಿತ ರಾಹುಲ್ ಲೋಖಂಡೆ ಹಾಗೂ ಮಗಳು ಶಶಿಕಲಾ (28) ಅವರೊಂದಿಗೆ ಅವರಾದಿ ಗ್ರಾಮ ಪಂಚಾಯಿತಿಗೆ ಬಂದಿದ್ದರು.
ಈ ವಿಚಾರ ತಿಳಿದ ಅವರ ಸಹೋದರರಾದ ಸಂಗಪ್ಪ ಹಾಗೂ ಬಸಪ್ಪ ಮತ್ತು ಬಸಪ್ಪನ ಪುತ್ರ ಮಡಿವಾಳೆಪ್ಪ ಅವರು ಆಯುಧಗಳೊಂದಿಗೆ ಪಂಚಾಯಿತಿ ಕಚೇರಿಗೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ರುದ್ರಪ್ಪ ಹಾಗೂ ಅವರ ಸಹೋದರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ಏಕಾಏಕಿ ವಿಕೋಪಕ್ಕೆ ತಿರುಗಿದೆ.
ಸಿಬ್ಬಂದಿ ಕಣ್ಣೆದುರೇ ತಂದೆಯ ಹತ್ಯೆ: ಜಗಳದ ವೇಳೆ ರುದ್ರಪ್ಪ ಅವರ ಮೇಲೆ ಕುಡಗೋಲಿನಿಂದ ದಾಳಿ ನಡೆಸಲಾಗಿದ್ದು, ಪಂಚಾಯಿತಿ ಕಚೇರಿ ಸಿಬ್ಬಂದಿಯ ಸಮ್ಮುಖದಲ್ಲೇ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತಂದೆಯ ಮೇಲೆ ದಾಳಿ ನಡೆಯುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಮುಂದಾದ ಮಗಳು ಶಶಿಕಲಾ ಅವರ ಮೇಲೂ ದಾಳಿ ನಡೆದಿದೆ. ಕುಡಗೋಲಿನಿಂದ ಹಲ್ಲೆಗೊಳಗಾದ ಶಶಿಕಲಾ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಒಂದೆಡೆ ತಂದೆಯ ಜೀವ ಉಳಿಸಲು ಓಡಿಬಂದ ಮಗಳು… ಮತ್ತೊಂದೆಡೆ ತಂದೆಯನ್ನೇ ಕಳೆದುಕೊಂಡು ತಾನೂ ಜೀವ ಕಳೆದುಕೊಂಡ ಮಗಳು. ಆಸ್ತಿ ವಿಚಾರದ ಕೌಟುಂಬಿಕ ಕಲಹ ಒಂದೇ ಕ್ಷಣದಲ್ಲಿ ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.
ಜೀವ ಉಳಿಸಿಕೊಳ್ಳಲು ಓಡಿದ ಸ್ನೇಹಿತ: ರುದ್ರಪ್ಪ ಅವರೊಂದಿಗೆ ಪಂಚಾಯಿತಿಗೆ ಬಂದಿದ್ದ ರಾಹುಲ್ ಲೋಖಂಡೆ ಕೂಡ ದಾಳಿಯಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿದ್ದಾರೆ. ಆರೋಪಿಗಳು ಅವರನ್ನು ಬೆನ್ನಟ್ಟಿ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡರೂ ರಾಹುಲ್ ಅವರು ಗ್ರಾಮದತ್ತ ಓಡಿ ಜೀವ ಉಳಿಸಿಕೊಂಡಿದ್ದಾರೆ.
ಬಳಿಕ ಅವರನ್ನು ಕಿತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





















