ಬೆಂಗಳೂರು: ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ನಲ್ಲಿ ವಿಧಾನಸಭೆಯ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಮತ್ತು ಉಪಸಭಾಪತಿಗಳ ಹೆಸರನ್ನು ಆಯ್ಕೆ ಪ್ರಕಟಿಸಿರುವುದಕ್ಕೆ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು, ಮಾನ್ಯ ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು ಮತ್ತು ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಾಗಿವೆ. ಈ ಹುದ್ದೆಗಳು ತಮ್ಮದೇ ಆದ ಘನತೆ, ಗೌರವ, ನಿಷ್ಪಕ್ಷಪಾತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸುವ ಪರಂಪರೆಯನ್ನು ಹೊಂದಿವೆ” ಎಂದು ಹೇಳಿದ್ದಾರೆ.
“ಆದರೆ, ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಪತ್ರ ಶೀರ್ಷಿಕೆಯಲ್ಲಿ (ಲೆಟರ್‌ಹೆಡ್) ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಅತ್ಯಂತ ಆಕ್ಷೇಪಾರ್ಹ. ಇಂತಹ ನಡೆ ಈ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆ ಮತ್ತು ಗೌರವಕ್ಕೂ ಕಳಂಕ ತರುವ ಪ್ರಯತ್ನವಾಗಿದೆ” ಎಂದಿದ್ದಾರೆ.
“ನನಗೆ ಗೊತ್ತಿರುವಂತೆ ಮುಂದೆ ಆಯ್ಕೆಯಾಗಬೇಕಿರುವ ಸಭಾಧ್ಯಕ್ಷರ, ಉಪಸಭಾಧ್ಯಕ್ಷರ, ಸಭಾಪತಿಗಳ ಹಾಗೂ ಉಪ ಸಭಾಪತಿಗಳ ಹೆಸರುಗಳನ್ನು ಆಳುವ ಪಕ್ಷದ ಲೆಟರ್ ಹೆಡ್‌ನಲ್ಲಿ ದೆಹಲಿಯಿಂದಲೇ ಕಳುಹಿಸುತ್ತಿರುವುದು ಇದೇ ಮೊದಲ ಬಾರಿ” ಎಂದು ಅವರು ಹೇಳಿದ್ದಾರೆ.
“ಇದು ಕೇವಲ ಸಂಸದೀಯ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ; ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನಿರ್ಲಕ್ಷ್ಯದ ಪ್ರತೀಕವಾಗಿದೆ. ಬಾಯಲ್ಲಿ ಸಂವಿಧಾನದ ರಕ್ಷಣೆ ಎಂದು ಹೇಳಿಕೊಂಡು, ಆಚರಣೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಉನ್ನತ ಹುದ್ದೆಗಳನ್ನು ಪಕ್ಷದ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ಬಹಿರಂಗವಾಗಿದೆ.” ಎಂದು ಅವರು ಹೇಳಿದ್ದಾರೆ.




















