SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕುಡಿದು ಕಾರು ಚಾಲನೆ – ತಪಾಸಣೆ ವೇಳೆ ಪೊಲೀಸರೊಂದಿಗೆ ಯುವತಿ ರಂಪಾಟ

ಕುಡಿದು ಕಾರು ಚಾಲನೆ – ತಪಾಸಣೆ ವೇಳೆ ಪೊಲೀಸರೊಂದಿಗೆ ಯುವತಿ ರಂಪಾಟ

0
128
ಸಾಂದರ್ಭಿಕ ಚಿತ್ರ

ದಾವಣಗೆರೆ: ನಗರದ ಶಾಮನೂರು ರಸ್ತೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಯುವತಿಯೊಬ್ಬಳು ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ದರ್ಪ ತೋರಿಸಿ ರಂಪಾಟ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಮದ್ಯ ಸೇವಿಸಿ ಒನ್‌ವೇ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದ ಯುವತಿಯನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ತಪಾಸಣೆ ವೇಳೆ ಯುವತಿ ಕಂಠಪೂರ್ತಿ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದ್ದು, ವಾಹನದಿಂದ ಕೆಳಗಿಳಿಯುವಂತೆ ಪೊಲೀಸರು ಸೂಚಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ: ಅಪಪ್ರಚಾರಕ್ಕೆ ಪೂರ್ಣವಿರಾಮ – ವಿಜಯೇಂದ್ರ ಪ್ರತಿಕ್ರಿಯೆ

ಆದರೆ, ಪೊಲೀಸರ ಸೂಚನೆಗೆ ಸ್ಪಂದಿಸದ ಯುವತಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ, ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ ಎಂದು ಆರೋಪಿಸಲಾಗಿದೆ. “ನೀವಾರು ಹೇಳುವುದಕ್ಕೆ? ಹೌದು, ನಾನು ಕುಡಿದು ಕಾರು ಓಡಿಸ್ತೇನೆ. ಏನಿವೀಗ?” ಎಂದು ಪೊಲೀಸರೊಂದಿಗೆ ಉದ್ಧಟತನದಿಂದ ವರ್ತಿಸಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಭಾಗಿಯಾಗಿರುವ ಯುವತಿ ದಾವಣಗೆರೆ ನಗರದ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಪುತ್ರಿ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ತಾಂತ್ರಿಕ ನಿರ್ವಹಣೆ ಹಿನ್ನೆಲೆ: ಇಂದು ಇಡೀ ದಿನ KEA ಹೆಲ್ಪ್‌ಲೈನ್ ಬಂದ್

ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.