ಬೆಂಗಳೂರು: ಹತ್ತನೇ ತರಗತಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಸೃಷ್ಟಿಸಿದ್ದ “ಇಂದೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ” ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ‘ಕರ್ನಾಟಕ ಪರೀಕ್ಷಾ ಮಂಡಳಿ’ಯೇ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಏಪ್ರಿಲ್ 15ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ವದಂತಿ ವೇಗವಾಗಿ ಹರಡಿದ ಹಿನ್ನೆಲೆಯಲ್ಲಿ, ಪರೀಕ್ಷಾ ಮಂಡಳಿ ತುರ್ತು ಪ್ರಕಟಣೆ ಹೊರಡಿಸಿ ಈ ಸುದ್ದಿಗಳನ್ನು ಖಂಡಿಸಿದೆ. “ಯಾವುದೇ ಕಾರಣಕ್ಕೂ ಇಂದು ಫಲಿತಾಂಶ ಪ್ರಕಟಿಸುವುದಿಲ್ಲ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು” ಎಂದು ಮಂಡಳಿ ಮನವಿ ಮಾಡಿದೆ.
ಮೌಲ್ಯಮಾಪನ ಪ್ರಕ್ರಿಯೆ ಯಾವ ಹಂತದಲ್ಲಿ? : ಮಂಡಳಿಯ ಮೂಲಗಳ ಪ್ರಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಇತ್ತೀಚಿಗಷ್ಟೇ ಆರಂಭವಾಗಿದೆ. ಲಕ್ಷಾಂತರ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವುದರಿಂದ ಈ ಪ್ರಕ್ರಿಯೆಗೆ ಇನ್ನೂ ಕೆಲವು ದಿನಗಳ ಕಾಲ ಬೇಕಾಗುತ್ತದೆ.
ಫಲಿತಾಂಶ ಯಾವಾಗ? : ಪ್ರಾಥಮಿಕ ಮಾಹಿತಿ ಪ್ರಕಾರ, ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಏಪ್ರಿಲ್ 23ರ ಬಳಿಕ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಆದರೆ ಅಂತಿಮ ದಿನಾಂಕವನ್ನು ಮಂಡಳಿ ಅಧಿಕೃತವಾಗಿ ಘೋಷಿಸುವವರೆಗೆ ವಿದ್ಯಾರ್ಥಿಗಳು ಕಾದಿರಬೇಕು.
ವದಂತಿಗಳ ಬಗ್ಗೆ ಎಚ್ಚರಿಕೆ : ಅಧಿಕಾರಿಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಹಾಗೂ ಮೋಸದ ವೆಬ್‌ಸೈಟ್‌ಗಳಿಂದ ದೂರವಿರಿ ಎಂದು ಎಚ್ಚರಿಸಿದೆ.






















