SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಗೃಹಲಕ್ಷ್ಮಿಯೇ ಆಧಾರ: ಪಿಂಚಣಿ ಇಲ್ಲದೆ ವೃದ್ಧೆಯ ಬದುಕು ಸಂಕಷ್ಟ

ಗೃಹಲಕ್ಷ್ಮಿಯೇ ಆಧಾರ: ಪಿಂಚಣಿ ಇಲ್ಲದೆ ವೃದ್ಧೆಯ ಬದುಕು ಸಂಕಷ್ಟ

0
323

84 ವರ್ಷದ ಅಜ್ಜಿ, ಆಧಾರ್‌ನಲ್ಲಿ 48 ವರ್ಷ: ಪಿಂಚಣಿ ಇಲ್ಲದೆ ವೃದ್ಧೆಯ ಬದುಕು ಸಂಕಷ್ಟ

ಬಾಗಲಕೋಟೆ: ಸರ್ಕಾರದ ಪಿಂಚಣಿ ಯೋಜನೆಗಳ ನಡುವೆಯೇ ಒಬ್ಬ ವಯೋವೃದ್ಧೆಯ ಸಂಕಷ್ಟದ ಬದುಕು ಕಣ್ಣೀರಾಗಿಸುವಂತಿದೆ. ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದ ದೇವರಾಜನಗರದಲ್ಲಿ ವಾಸಿಸುವ 84 ವರ್ಷದ ಕುತಿಜಾಬಿ ರಾಜೇಸಾಬ ಪಠಾಯತ, ಕಳೆದ ಒಂದು ವರ್ಷದಿಂದ ಪಿಂಚಣಿಗಾಗಿ ಅಧಿಕಾರಿಗಳ ಬಾಗಿಲು ತಟ್ಟುತ್ತಿದ್ದರೂ ನ್ಯಾಯ ಸಿಗದೇ ಸಂಕಷ್ಟದಲ್ಲಿದ್ದಾರೆ.

ಆಧಾರ್ ದೋಷವೇ ಜೀವದ ಸಂಕಷ್ಟ: ಕುತಿಜಾಬಿಯ ನಿಜವಾದ ವಯಸ್ಸು 84 ವರ್ಷವಾದರೂ, ಆಧಾರ್ ಕಾರ್ಡ್‌ನಲ್ಲಿ 48 ವರ್ಷ ಎಂದು ದಾಖಲಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಈ ತಾಂತ್ರಿಕ ದೋಷದಿಂದಲೇ ಕಳೆದ ಒಂದು ವರ್ಷದಿಂದ ಅವರಿಗೆ ದೊರೆಯುತ್ತಿದ್ದ ಮಾಸಿಕ ₹1200 ಪಿಂಚಣಿ ಸಂಪೂರ್ಣ ಸ್ಥಗಿತಗೊಂಡಿದೆ.

ಅಧಿಕಾರಿಗಳ ಬಳಿ ಅಲೆದಾಟ : ಪಿಂಚಣಿ ಮರುಪ್ರಾರಂಭಿಸಲು ಅವರು ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದು, ರಬಕವಿ-ಬನಹಟ್ಟಿಯ ಕಛೇರಿಗಳಿಗೆ ಹಲವಾರು ಬಾರಿ ಅಲೆದಿದ್ದಾರೆ. ಆದರೂ ಯಾವುದೇ ಪರಿಹಾರ ದೊರಕದೇ ಮನೆಗೆ ಮರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬದುಕಿಗಾಗಿ ಹೋರಾಟ : ಈ ಹಿಂದೆ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುತಿಜಾಬಿ, ಈಗ ವಯೋಸಹಜ ಸಮಸ್ಯೆಯಿಂದ ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ. ದಿನನಿತ್ಯ ಊಟ ಮತ್ತು ಔಷಧ ಖರ್ಚಿಗೂ ಹಣ ಇಲ್ಲದ ಸ್ಥಿತಿ ಎದುರಿಸುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಮಾತ್ರ ಆಧಾರ : ಪ್ರಸ್ತುತ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತಿರುವ ಸಹಾಯವೇ ಅವರ ಬದುಕಿಗೆ ಒಂದೇ ಆಧಾರವಾಗಿದೆ ಎಂದು ಅವರು ಹೇಳಿದ್ದಾರೆ.