ಚೆನ್ನೈ: ಕೇಂದ್ರ ಸರ್ಕಾರ ತರಲಿರುವ ಕ್ಷೇತ್ರ ಪುನರ್ವಿಂಗಡಣೆ (Delimitation) ತಿದ್ದುಪಡಿ ಮಸೂದೆ ವಿರುದ್ಧ ತಮಿಳುನಾಡಿನಲ್ಲಿ ರಾಜಕೀಯ ವಿಕೋಪಕ್ಕೆ ತಿರುಗಿದ್ದು ಈ ಕುರಿತಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡ ಅವರು, ಈ ಮಸೂದೆ ದಕ್ಷಿಣ ರಾಜ್ಯಗಳಿಗೆ “ದೊಡ್ಡ ಐತಿಹಾಸಿಕ ಅನ್ಯಾಯ”ವಾಗಲಿದೆ ಎಂದು ಆರೋಪಿಸಿದ್ದಾರೆ. “ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ” ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.
ಕಪ್ಪು ಬಾವುಟ ಪ್ರತಿಭಟನೆಗೆ ಕರೆ : ಸ್ಟಾಲಿನ್ ಅವರು ಘೋಷಿಸಿದಂತೆ, ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ತಮಿಳುನಾಡಿನ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ. ಈ ಕ್ರಮದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲು ಯೋಜಿಸಲಾಗಿದೆ.
“ದಕ್ಷಿಣ ರಾಜ್ಯಗಳಿಗೆ ಅನ್ಯಾಯ” ಆರೋಪ : ಸ್ಟಾಲಿನ್ ಅವರ ಪ್ರಕಾರ, ಕೇಂದ್ರ ಸರ್ಕಾರದ ಈ ಕ್ರಮ ದಕ್ಷಿಣ ಭಾರತದ ರಾಜಕೀಯ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನವಾಗಿದೆ. “ವಿಂಧ್ಯ ಪರ್ವತಗಳ ದಕ್ಷಿಣದಲ್ಲಿರುವ ಪ್ರತಿಯೊಬ್ಬರೂ ಕೋಪಗೊಂಡಿದ್ದಾರೆ. ಬಿಜೆಪಿ ಬೆಂಕಿಯೊಂದಿಗೆ ಆಟವಾಡುತ್ತಿದೆ” ಎಂದು ಅವರು ಕಿಡಿಕಾರಿದ್ದಾರೆ.
ಕೇಂದ್ರಕ್ಕೆ ಎಚ್ಚರಿಕೆ : ಕೇಂದ್ರ ಸರ್ಕಾರ ತಮಿಳುನಾಡಿನ ಧ್ವನಿಯನ್ನು ಗೌರವಿಸದಿದ್ದರೆ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ. “ಇದು ಬೆದರಿಕೆ ಅಲ್ಲ, ಕಠಿಣ ಎಚ್ಚರಿಕೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತುರ್ತು ಸಭೆ : ಈ ಬೆಳವಣಿಗೆಯ ಹಿನ್ನೆಲೆದಲ್ಲಿ, ಡಿಎಂಕೆ ಸಂಸದರನ್ನು ಒಳಗೊಂಡ ತುರ್ತು ಸಭೆಯನ್ನು ಕೂಡ ಸ್ಟಾಲಿನ್ ಕರೆದಿದ್ದು, ಮುಂದಿನ ಹೋರಾಟದ ರೂಪರೇಖೆ ಬಗ್ಗೆ ಚರ್ಚಿಸಲಾಗಿದೆ.




















