ಕರ್ನಾಟಕ SIR ಕರಡು ಮತದಾರರ ಪಟ್ಟಿ ಬಿಡುಗಡೆ: 1.07 ಕೋಟಿ ಹೆಸರುಗಳು ಹೊರಗೆ
ಬೆಂಗಳೂರು: ಮನೆ ಮನೆಗೆ ತೆರಳಿ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಕರ್ನಾಟಕದ ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸೋಮವಾರ, ಆಗಸ್ಟ್ 24ರಂದು ಪ್ರಕಟಿಸಿದೆ. ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದಾಗಿದೆ.
SIR ಪರಿಶೀಲನೆ ವೇಳೆ ರಾಜ್ಯದಲ್ಲಿ ಸುಮಾರು 1.07 ಕೋಟಿ ಮತದಾರರನ್ನು ಗೈರು, ಸ್ಥಳಾಂತರಗೊಂಡವರು, ಮೃತಪಟ್ಟವರು ಅಥವಾ ನಕಲಿ ಮತದಾರರು ಸೇರಿದಂತೆ ASDD ವರ್ಗದಲ್ಲಿ ಗುರುತಿಸಲಾಗಿದೆ. ಇವರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಸುಮಾರು 4.46 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಇರುವ ನಿರೀಕ್ಷೆಯಿದೆ.
ಇದೇ ವೇಳೆ 43.80 ಲಕ್ಷಕ್ಕೂ ಹೆಚ್ಚು ಮತದಾರರ ದಾಖಲೆಗಳಲ್ಲಿ ಮ್ಯಾಪಿಂಗ್ ಆಗದಿರುವುದು ಅಥವಾ ಇತರೆ ವ್ಯತ್ಯಾಸಗಳು ಕಂಡುಬಂದಿದ್ದು, ಅಂತಹ ಮತದಾರರಿಗೆ ನೋಟಿಸ್ ನೀಡಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಈ ಪೈಕಿ ಸುಮಾರು 23.45 ಲಕ್ಷ ಮಂದಿ ‘ಅನ್‌ಮ್ಯಾಪ್ಡ್’ ಮತದಾರರಾಗಿದ್ದು, ಉಳಿದವರ ದಾಖಲೆಗಳಲ್ಲಿ ವಿವಿಧ ವ್ಯತ್ಯಾಸಗಳು ಪತ್ತೆಯಾಗಿವೆ.
ನೋಟಿಸ್ ಪಡೆಯುವ ಮತದಾರರಿಗೆ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ತಿಳಿಸಲಾಗುತ್ತದೆ. ಸಂಬಂಧಪಟ್ಟ ಮತದಾರರು ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನಿಗದಿತ ದಿನ ಹಾಜರಾಗಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ನೀಡುವ ವ್ಯವಸ್ಥೆಯೂ ಇದೆ.
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಅರ್ಹ ಮತದಾರರು ಅಥವಾ ಪಟ್ಟಿಯಲ್ಲಿನ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳಲ್ಲಿ ದೋಷವಿದ್ದರೆ ನಿಗದಿತ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಹೊಸದಾಗಿ ಮತದಾರರಾಗಿ ಸೇರ್ಪಡೆಯಾಗಬೇಕಾದವರು ಫಾರಂ-6 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅಧಿಕೃತ ಜಾಲತಾಣ: ceo.karnataka.gov.in ನಲ್ಲಿ https://voters.eci.gov.in/download-eroll?stateCode=S10 ಜಾಲತಾಣದ ಮೂಲಕ ಕರಡು ಪಟ್ಟಿ ಪಡೆಯಬಹುದಾಗಿದೆ. ಆದರೆ ಕರಡು ಪಟ್ಟಿ ಬಿಡುಗಡೆಯಾದ ಬಳಿಕ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಪ್ರಮಾಣದ ಜನರು ಏಕಕಾಲದಲ್ಲಿ ಪರಿಶೀಲಿಸಲು ಮುಂದಾದ ಹಿನ್ನೆಲೆಯಲ್ಲಿ ಸೈಟ್ ನಿಧಾನಗೊಳ್ಳುವುದು, ಪುಟಗಳು ತೆರೆಯದಿರುವುದು ಹಾಗೂ PDF ಡೌನ್‌ಲೋಡ್‌ಗೆ ತೊಂದರೆ ಉಂಟಾಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಚುನಾವಣಾ ಅಧಿಕಾರಿಗಳು ಸಾರ್ವಜನಿಕರು ಆತುರಪಡದೆ ಸ್ವಲ್ಪ ಸಮಯದ ಬಳಿಕ ಮತ್ತೆ ಪ್ರಯತ್ನಿಸುವಂತೆ ಸೂಚಿಸಿದ್ದಾರೆ.
ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕದ ಅಧಿಕೃತ ವೆಬ್‌ಸೈಟ್ ಹಾಗೂ ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್ ಮೂಲಕ ಪರಿಶೀಲಿಸಬಹುದು.
SIR ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯದಂತೆ ಹಕ್ಕು ಮತ್ತು ಆಕ್ಷೇಪಣೆಗಳ ಅವಕಾಶವನ್ನು ಬಳಸಿಕೊಳ್ಳುವುದು ಮಹತ್ವದ್ದಾಗಿದೆ. ಕರ್ನಾಟಕದ ಅಂತಿಮ ಪರಿಷ್ಕೃತ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗುವ ವೇಳಾಪಟ್ಟಿ ಇದೆ.
ನೇರ ಲಿಂಕ್‌ಗಾಗಿ ಇಲ್ಲಿ ಕೆಳಗಿನ ಚಿತ್ರ ಕ್ಲಿಕ್ ಮಾಡಿ 👇🏻
- SIR ಕರಡು ಪಟ್ಟಿ ಪ್ರಕಟ: ಸೆ.23ರವರೆಗೆ ಹಕ್ಕು, ಆಕ್ಷೇಪಣೆಗೆ ಅವಕಾಶ
- 30 ಅಡಿ ಹೂಗುಚ್ಛ,₹9 ಲಕ್ಷ ವೆಚ್ಚ: ಸಿನಿಮಿಯ ರೀತಿ ಪ್ರಪೋಸಲ್; ಸಾಮಾಜಿಕ ಜಾಲತಾಣದಲ್ಲಿವಿಡಿಯೋ ವೈರಲ್
- DIPR ವಿರುದ್ಧ ಕಿಡಿ: ನಾಗೇಂದ್ರ ರಾಜೀನಾಮೆಗೆ ರಾತ್ರಿಯಿಡೀ ಪ್ರತಿಭಟನೆ
- ಅಕ್ಷಯ್ ಖನ್ನಾ ಗ್ಲಿಂಪ್ಸ್ ಧಮಾಕ: ‘ಮಹಾಕಾಳಿ’ ರಿಲೀಸ್ ಡೇಟ್ ಘೋಷಣೆ
- ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ನಾಯಕರ ಬಂಧನ





















