SK Home Ad
Home ನಮ್ಮ ಜಿಲ್ಲೆ ಉಡುಪಿ ತಂದೆ-ತಾಯಿಯನ್ನೇ ಕೊಂದು 112ಕ್ಕೆ ಕರೆ ಮಾಡಿದ ಪಾಪಿ ಮಗ!

ತಂದೆ-ತಾಯಿಯನ್ನೇ ಕೊಂದು 112ಕ್ಕೆ ಕರೆ ಮಾಡಿದ ಪಾಪಿ ಮಗ!

0
86
ಉಡುಪಿಯಲ್ಲಿ ದಾರುಣ ಘಟನೆ: ಸುತ್ತಿಗೆಯಿಂದ ಹೊಡೆದು ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ

ಉಡುಪಿಯಲ್ಲಿ ದಾರುಣ ಘಟನೆ: ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ

ಸಂ.ಕ.ಸಮಾಚಾರ, ಉಡುಪಿ : ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಹೆತ್ತ ತಂದೆ-ತಾಯಿಯನ್ನೇ ಮಗನೊಬ್ಬ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬ್ರಹ್ಮಾವರದ ಗಾಂಧಿನಗರ ನಿವಾಸಿ ಶಾಹಿದ್ ಅಲಿ (31) ಬಂಧಿತ ಆರೋಪಿ. ಮೃತರನ್ನು ಮೆಹಬೂಬ್ ಹಾಗೂ ಅವರ ಪತ್ನಿ ಸಂಶದ್ ಬೇಗಂ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ಮನೆಯಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಾಹಿದ್ ಅಲಿ ತನ್ನ ತಂದೆ-ತಾಯಿ ತನಗೆ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದು, ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿ: ಘಟನೆ ಬಳಿಕ ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಗೆ ಆರೋಪಿ ಸ್ವತಃ 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಮಾಹಿತಿ ದೊರೆತ ತಕ್ಷಣ ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣವೇನು, ಆರೋಪಿ ನೀಡಿರುವ ಮಾನಸಿಕ ಹಿಂಸೆಯ ಆರೋಪದ ಹಿನ್ನೆಲೆ ಏನು ಹಾಗೂ ಘಟನೆಯ ಹಿಂದೆ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುಟುಂಬದೊಳಗಿನ ಕಲಹವೇ ಘಟನೆಗೆ ಕಾರಣವೇ ಅಥವಾ ಇತರ ಯಾವುದೇ ವಿಚಾರ ಇದೆಯೇ ಎಂಬುದನ್ನು ತನಿಖೆಯ ಬಳಿಕವಷ್ಟೇ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.