SK Home Ad
Home ಸುದ್ದಿ ರಾಜ್ಯ ಮತ್ತೆ ಮುನ್ನೆಲೆಗೆ ಬಂತು ಮೇಕೆದಾಟು ವಿವಾದ: DK ಖಡಕ್ ಮಾತು, ಸಿಎಂ ವಿಜಯ್ ತುರ್ತು ಸಭೆ!

ಮತ್ತೆ ಮುನ್ನೆಲೆಗೆ ಬಂತು ಮೇಕೆದಾಟು ವಿವಾದ: DK ಖಡಕ್ ಮಾತು, ಸಿಎಂ ವಿಜಯ್ ತುರ್ತು ಸಭೆ!

0
82

ಮೇಕೆದಾಟು ಯೋಜನೆಗೆ ಕರ್ನಾಟಕ ಪಟ್ಟು, ತಮಿಳುನಾಡು ಪ್ರತಿರೋಧ!

ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಕ್ಕೆ ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆ ಕುರಿತ ವಿವಾದ ಮತ್ತೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರದ ವಿರೋಧದ ನಡುವೆಯೇ ಕರ್ನಾಟಕ ಸರ್ಕಾರ ಯೋಜನೆ ಮುಂದುವರಿಸುವ ನಿಲುವು ಸ್ಪಷ್ಟಪಡಿಸಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವುಮಾರ್‌, “ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಹಕ್ಕು ತಮಿಳುನಾಡಿಗೆ ಇಲ್ಲ” ಎಂದು ಹೇಳುವ ಮೂಲಕ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಈಗಾಗಲೇ ಹಲವು ಪ್ರಾಥಮಿಕ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. “ನಾವು ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿದ್ದೇವೆ. ಮೇಕೆದಾಟು ಕಚೇರಿಯನ್ನು ತೆರೆಯಲಾಗಿದೆ, ಜಮೀನು ಗುರುತಿಸಲಾಗಿದೆ. ಹೊಸ ಡಿಪಿಆರ್ ಸಲ್ಲಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರೆತ ತಕ್ಷಣ ಭೂಮಿಪೂಜೆ ನೆರವೇರಿಸಲಾಗುತ್ತದೆ” ಎಂದು ಹೇಳಿದರು.

ತಮಿಳುನಾಡು ಸರ್ಕಾರವು ಕಾವೇರಿ ಜಲ ಸಮಿತಿ ಅಥವಾ ಕೇಂದ್ರ ಜಲ ಆಯೋಗದ ಮುಂದೆ ದೂರು ನೀಡಿದರೂ, ಕರ್ನಾಟಕ ಸರ್ಕಾರದ ಪರವಾಗಿ ಅರ್ಜಿ ವಜಾಗೊಳ್ಳುವ ವಿಶ್ವಾಸವಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. “ತಮಿಳುನಾಡಿಗೆ ಈ ಯೋಜನೆಯನ್ನು ತಡೆಯುವ ಯಾವುದೇ ಹಕ್ಕಿಲ್ಲ” ಎಂದು ಅವರು ಪುನರುಚ್ಚರಿಸಿದರು.

CM ವಿಜಯ್ ತುರ್ತು ಸಭೆ: ತಮಿಳನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ಕಾನೂನು ಹೋರಾಟ ಮುಂದುವರಿಸುವ ಸಂಕೇತ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಜಲ ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆದಿದೆ.

ತಮಿಳುನಾಡು ಸರ್ಕಾರದ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಸುಪ್ರಿಂ ಕೋರ್ಟ್‌ ನೀಡಿರುವ ಹಿಂದಿನ ತೀರ್ಪಿನ ವ್ಯಾಪ್ತಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ 2018 ಮತ್ತು 2022ರಲ್ಲಿ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2025ರ ನವೆಂಬರ್ 13ರಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಮೇಕೆದಾಟು ಯೋಜನೆಗೆ ಯಾವುದೇ ಅಂತಿಮ ಅನುಮತಿ ನೀಡಿಲ್ಲ ಮತ್ತು ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಯೋಜನೆ ನ್ಯಾಯಾಲಯದ ಹಿಂದಿನ ತೀರ್ಪಿನ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ತಜ್ಞ ಸಂಸ್ಥೆಯಾಗಿರುವ Central Water Commission ಮಾತ್ರ ನಿರ್ಧರಿಸಬಹುದು ಎಂದು ಕೋರ್ಟ್ ಹೇಳಿ ಪ್ರಕರಣಗಳನ್ನು ಮುಚ್ಚಿತ್ತು.

ಈ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದರೆ ನಂತರ ಅದು ವಜಾಗೊಂಡಿರುವ ಹಿನ್ನೆಲೆ, ಮುಂದಿನ ಕಾನೂನು ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರೈತರ ಹಿತಾಸಕ್ತಿ ಮತ್ತು ರಾಜ್ಯದ ನೀರಿನ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಗಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ವಿವಾದ ಹಲವು ದಶಕಗಳಿಂದ ಮುಂದುವರಿದಿದೆ. ಈ ನಡುವೆ ಮೇಕೆದಾಟು ಯೋಜನೆ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯ ಎಂದು ಕರ್ನಾಟಕ ವಾದಿಸುತ್ತಿದ್ದರೆ, ನೀರಿನ ಹರಿವು ಮತ್ತು ರೈತರ ಹಿತಾಸಕ್ತಿಗೆ ಹಾನಿಯಾಗಲಿದೆ ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಮೇಕೆದಾಟು ಯೋಜನೆ ಕುರಿತಾಗಿ ಎರಡೂ ರಾಜ್ಯಗಳ ನಡುವಿನ ರಾಜಕೀಯ ಹಾಗೂ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.