ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ ರೋಮಾಂಚಕ ಪಂದ್ಯಗಳು ಮುಗಿದಿದ್ದು, ಈಗ ಅಸಲಿ ನಾಕೌಟ್ ಯುದ್ಧಕ್ಕೆ ವೇದಿಕೆ ಸಜ್ಜಾಗಿದೆ. ಹತ್ತೂ ತಂಡಗಳ ನಡುವಿನ ತೀವ್ರ ಪೈಪೋಟಿಯ ನಂತರ, ಅಂತಿಮವಾಗಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್‌ಗೆ ಲಗ್ಗೆ ಇಟ್ಟಿವೆ.
ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಪ್ರವೇಶ: ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 30 ರನ್‌ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಮತ್ತು ಕೆಕೆಆರ್ ಕನಸನ್ನು ನುಚ್ಚುನೂರು ಮಾಡಿ 16 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಮೇ 27 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡವು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಅಗ್ರಸ್ಥಾನದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ: ಈ ಬಾರಿಯ ಪ್ಲೇಆಫ್‌ನ ಅಸಲಿ ಹೈಲೈಟ್ ಅಂದ್ರೆ ಅದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ಸೀಸನ್‌ನಲ್ಲಿ ಆರ್‌ಸಿಬಿ ಅಕ್ಷರಶಃ ಅಬ್ಬರಿಸಿದೆ. ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ, +0.783 ರನ್ ರೇಟ್‌ನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕಿಂಗ್ ವಿರಾಟ್ ಕೊಹ್ಲಿ ಬರೋಬ್ಬರಿ 557 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದರೆ, ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ 24 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಕ್ವಾಲಿಫೈಯರ್ 1: ಆರ್‌ಸಿಬಿ ವರ್ಸಸ್ ಗುಜರಾತ್ ಟೈಟಾನ್ಸ್ ಮೇ 26 ರಂದು ಧರ್ಮಶಾಲಾದ ಸುಂದರ ಮೈದಾನದಲ್ಲಿ ನಡೆಯಲಿರುವ ‘ಕ್ವಾಲಿಫೈಯರ್ 1’ ಪಂದ್ಯದಲ್ಲಿ ಆರ್‌ಸಿಬಿ ತಂಡವು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿಗೆ ಫೈನಲ್ ತಲುಪಲು ಇಲ್ಲಿ ಎರಡು ಅವಕಾಶ ಸಿಗಲಿದ್ದು, ಮೊದಲ ಪಂದ್ಯದಲ್ಲೇ ಗೆದ್ದು ನೇರವಾಗಿ ಮೇ 31ರ ಗ್ರ್ಯಾಂಡ್ ಫೈನಲ್‌ಗೆ ಲಗ್ಗೆ ಇಡುವುದು ಬೆಂಗಳೂರು ತಂಡದ ಗುರಿಯಾಗಿದೆ.
ಒಟ್ಟಾರೆ.. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಯೊಂದಿಗೆ ಆರ್‌ಸಿಬಿ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ? ಕಾದು ನೋಡಬೇಕಿದೆ.






















