SK Home Ad
Home ಸುದ್ದಿ ರಾಜ್ಯ ಹಾಲಿನ ದರ ಏರಿಕೆಗೆ ಸಂಪುಟ ಒಪ್ಪಿಗೆ: ಪ್ರತಿ ಲೀಟರ್‌ಗೆ ₹8 ಹೆಚ್ಚಳ

ಹಾಲಿನ ದರ ಏರಿಕೆಗೆ ಸಂಪುಟ ಒಪ್ಪಿಗೆ: ಪ್ರತಿ ಲೀಟರ್‌ಗೆ ₹8 ಹೆಚ್ಚಳ

0
12

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬಿಗ್‌ ಶಾಕ್‌ ಎದುರಾಗಿದೆ. ನಂದಿನಿ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡುವ ಪ್ರಸ್ತಾವನೆಗೆ ಸಂಪುಟ ಸಮ್ಮತಿ ಸೂಚಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚೆ ಮಾಡಲಾಯಿತು. ಕೆಎಂಎಫ್‌ ಹಾಗೂ ರಾಜ್ಯದ ಹಾಲು ಒಕ್ಕೂಟಗಳು ಹಾಲಿನ ಖರೀದಿ, ಜಾನುವಾರುಗಳ ಮೇವು, ಪಶು ಆಹಾರ, ಔಷಧ, ಸಾಗಣೆ ಸೇರಿದಂತೆ ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆಗೆ ಮನವಿ ಮಾಡಿದ್ದವು.

ಸದ್ಯದ ಮಾಹಿತಿಯಂತೆ ಪ್ರತಿ ಲೀಟರ್‌ಗೆ 8 ರೂ. ಗಳಷ್ಟು ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಸಂಪೂರ್ಣ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ನಂದಿನಿ ಟೋನ್ಡ್‌ ಹಾಲಿನ ದರ ಲೀಟರ್‌ಗೆ 46ರಿಂದ 54 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.

ಆದರೆ ರಾಜ್ಯದಲ್ಲಿ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ದರ ಏರಿಕೆಯನ್ನು ತಕ್ಷಣ ಜಾರಿಗೊಳಿಸಲು ಚುನಾವಣಾ ಆಯೋಗದ ಅನುಮತಿ ಅಗತ್ಯವಾಗಿದೆ. ಅನುಮತಿ ದೊರೆತ ಬಳಿಕ ಅಕ್ಟೋಬರ್ 27ರ ಬಳಿಕ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ 8 ರಿಂದ 10 ರೂ.ವರೆಗೆ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಹೆಚ್ಚಳದಿಂದ ರೈತರಿಗೆ ನೀಡುವ ದರ ಹಾಗೂ ಹಾಲು ಉತ್ಪಾದನಾ ವ್ಯವಸ್ಥೆಗೆ ಹೆಚ್ಚಿನ ನೆರವು ದೊರೆಯಲಿದೆ ಎಂದು ಒಕ್ಕೂಟಗಳು ಪ್ರತಿಪಾದಿಸಿವೆ.

ಸಂಪುಟದ ನಿರ್ಧಾರದಿಂದ ನಂದಿನಿ ಹಾಲು ಮತ್ತೊಮ್ಮೆ ದುಬಾರಿಯಾಗುವ ಸಾಧ್ಯತೆ ಇದ್ದು, ಅಂತಿಮ ಜಾರಿ ದಿನಾಂಕ ಹಾಗೂ ದರದ ಕುರಿತು ಸರ್ಕಾರದ ಅಧಿಕೃತ ಆದೇಶದ ಬಳಿಕ ಸ್ಪಷ್ಟತೆ ಸಿಗಲಿದೆ.