SK Home Ad
Home ಸುದ್ದಿ ದೇಶ ‘ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ...

‘ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವನತಾರಾ ಬೆಂಬಲ

0
41

ಜಾಮ್‌ನಗರ: ದೇಶಾದ್ಯಂತ ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಅನಂತ್ ಅಂಬಾನಿ ಅವರು ‘ಚಾಂಪಿಯನ್ಸ್ ಆಫ್ ಕೇರ್’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರ ಭಾಗವಾಗಿ ಕರ್ನಾಟಕದ ಮೂರು ಪ್ರಾಣಿ ಕಲ್ಯಾಣ ಸಂಸ್ಥೆಗಳ ಜತೆಗೆ ವನತಾರಾ ಪಾಲುದಾರಿಕೆ ವಹಿಸಿದೆ.

ಮಂಗಳೂರಿನ ಆನಿಮಲ್‌ ಕೇರ್‌ ಟ್ರಸ್ಟ್‌, ಬೆಂಗಳೂರಿನ ಕಂಪಾಶನ್‌ ಅನ್‌ ಲಿಮಿಟೆಡ್‌ ಪ್ಲಸ್‌ ಆಕ್ಷನ್‌ (ಸಿಯುಪಿಎ) ಮತ್ತು ಬಳ್ಳಾರಿಯ ವಸುಧೈವ ಕುಟುಂಬಕಮ್‌ ಸಂಸ್ಥೆಯ ಜತೆಗೆ ವನತಾರಾ ಪಾಲುದಾರಿಕೆ ವಹಿಸಿದೆ.

ವನತಾರಾ ಸಂಸ್ಥೆಯ ಈ ಅಭಿಯಾನದೊಂದಿಗೆ ದೇಶಾದ್ಯಂತ ಒಟ್ಟು 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳು ಕೈಜೋಡಿಸಿವೆ. ಇದರ ಮೂಲಕ ಪ್ರತಿವರ್ಷ ಅಂದಾಜು 20 ಲಕ್ಷಕ್ಕೂ ಅಧಿಕ ಪ್ರಾಣಿಗಳಿಗೆ ಚಿಕಿತ್ಸೆ, ರಕ್ಷಣೆ, ಆಶ್ರಯ, ಆಹಾರ ಹಾಗೂ ಇತರೆ ಅಗತ್ಯ ನೆರವು ತಲುಪಿಸುವ ಗುರಿ ಹೊಂದಲಾಗಿದೆ.

ಈ ಅಭಿಯಾನದಡಿ ಬೀದಿ ನಾಯಿಗಳು ಮತ್ತು ಬೆಕ್ಕುಗಳು, ಕೈಬಿಡಲ್ಪಟ್ಟ ಅಥವಾ ಗಾಯಗೊಂಡ ಪ್ರಾಣಿಗಳ ಜೊತೆಗೆ ಜಾನುವಾರುಗಳು, ಕತ್ತೆಗಳು ಹಾಗೂ ಕುದುರೆಗಳಿಗೂ ನೆರವು ಸಿಗಲಿದೆ. ಆಯಾ ಸಂಘಟನೆಗಳ ಬೇಡಿಕೆಗೆ ತಕ್ಕಂತೆ ಅವುಗಳಿಗೆ ಆಂಬುಲೆನ್ಸ್‌ಗಳು, ರಕ್ಷಣಾ ಉಪಕರಣಗಳು, ವೈದ್ಯಕೀಯ ಚಿಕಿತ್ಸೆ ಹಾಗೂ ಪರೀಕ್ಷಾ ಯಂತ್ರಗಳು, ಆಶ್ರಯ ತಾಣಗಳು ಮತ್ತು ತರಬೇತಿಯಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಈ ಕುರಿತು ಮಾತನಾಡಿರುವ ಅನಂತ್ ಅಂಬಾನಿ, “ಪ್ರತಿದಿನ ಅನೇಕ ಜನರು ತಮ್ಮ ಬಳಿಯಿರುವ ಮಿತ ಸಂಪನ್ಮೂಲಗಳಲ್ಲೇ ಅಶಕ್ತ ಪ್ರಾಣಿಗಳ ಆರೈಕೆ ಮಾಡುತ್ತಿದ್ದಾರೆ. ‘ಚಾಂಪಿಯನ್ಸ್ ಆಫ್ ಕೇರ್’ ಮೂಲಕ ನಾವು ಅವರೊಂದಿಗೆ ನಿಂತು ಈ ಮಹತ್ಕಾರ್ಯವನ್ನು ಮತ್ತಷ್ಟು ಬಲಪಡಿಸಲು ಬಯಸುತ್ತೇವೆ. ನಮಗೆ ‘ಪ್ರತಿ ಜೀವವೂ ಮುಖ್ಯ’ ಎನ್ನುವುದರ ನಿಜವಾದ ಅರ್ಥವೇ ಇದು” ಎಂದು ತಿಳಿಸಿದ್ದಾರೆ.

ವನತಾರಾ ಹಾಗೂ ಈ ಅಭಿಯಾನದಲ್ಲಿ ಪಾಲ್ಗೊಂಡಿರುವ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಒಡಂಬಡಿಕೆಗೆ ಸಹಿ ಹಾಕಿವೆ. ಇದರಡಿ ಮಾಹಿತಿ, ಅನುಭವ ಹಾಗೂ ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಳ್ಳಲಾಗುವುದು. ಇದರಿಂದ ಪ್ರಾಣಿ ರಕ್ಷಣೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಅತ್ಯುತ್ತಮ ನೆರವು ಲಭ್ಯವಾಗಲಿದೆ.