SK Home Ad
Home ಸುದ್ದಿ ರಾಜ್ಯ ರೇಷನ್ ಕಾರ್ಡ್ e-KYCಗೆ ಗುಡ್‌ನ್ಯೂಸ್: 8 ಜಿಲ್ಲೆಗಳಲ್ಲಿ ‘ಅನ್ನ ಸೇವೆ’ ಆ್ಯಪ್ ಪೈಲಟ್ ಯೋಜನೆ

ರೇಷನ್ ಕಾರ್ಡ್ e-KYCಗೆ ಗುಡ್‌ನ್ಯೂಸ್: 8 ಜಿಲ್ಲೆಗಳಲ್ಲಿ ‘ಅನ್ನ ಸೇವೆ’ ಆ್ಯಪ್ ಪೈಲಟ್ ಯೋಜನೆ

0
5
ರೇಷನ್ ಕಾರ್ಡ್ e-KYCಗೆ ಹೊಸ ಆ್ಯಪ್; ಅ.10ರಿಂದ ರಾಜ್ಯದ ಉಳಿದ ಜಿಲ್ಲೆಗಳಿಗೂ ವಿಸ್ತರಣೆ

ಬೆಂಗಳೂರು: ರೇಷನ್ ಕಾರ್ಡ್‌ದಾರರಿಗೆ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನ ಸೇವೆ’ ಎಂಬ ಮೊಬೈಲ್ ಆ್ಯಪ್‌ನ್ನು ಪರಿಚಯಿಸಿದೆ. ಈ ಮೂಲಕ ಮುಂದಿನ ಹಂತದಲ್ಲಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗೆ ತೆರಳುವ ಅಗತ್ಯವಿಲ್ಲದೆ ಮೊಬೈಲ್‌ನಲ್ಲೇ e-KYC ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಇದನ್ನು 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ (Pilot Project) ಜಾರಿಗೆ ತರಲಾಗಿದೆ. ಪೈಲಟ್ ಯೋಜನೆಯ ಫಲಿತಾಂಶವನ್ನು ಆಧರಿಸಿ ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಅಧಿಕಾರಿಗಳಿಗೆ ಸೌಲಭ್ಯ : ಆರಂಭಿಕ ಹಂತದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರು ‘ಅನ್ನ ಸೇವೆ’ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುವ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಫಲಾನುಭವಿಗಳ e-KYC ಪ್ರಕ್ರಿಯೆ ನಡೆಸಲಿದ್ದಾರೆ.

ಈ ಪ್ರಕ್ರಿಯೆಯ ಅನುಭವ ಹಾಗೂ ತಾಂತ್ರಿಕ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಫಲಾನುಭವಿಗಳಿಗೂ ನೇರವಾಗಿ ಆ್ಯಪ್ ಬಳಸುವ ಅವಕಾಶ ಕಲ್ಪಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

ಅಕ್ಟೋಬರ್ 10ರಿಂದ ಮತ್ತಷ್ಟು ಜಿಲ್ಲೆಗಳಿಗೆ : ಸರ್ಕಾರದ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 10, 2026ರಿಂದ ರಾಜ್ಯದ ಉಳಿದ ಜಿಲ್ಲೆಗಳ ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸ್ವತಃ e-KYC ಮಾಡಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ಇದರಿಂದ ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಲ್ಲಿ e-KYC ಮಾಡಿಸಿಕೊಳ್ಳಲು ಎದುರಾಗುತ್ತಿರುವ ಸರತಿ ಸಾಲು, ಸಮಯದ ಸಮಸ್ಯೆ ಹಾಗೂ ಕೆಲವು ಕಡೆ ಕಂಡುಬರುವ ತಾಂತ್ರಿಕ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯವಾಗುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ನಲ್ಲಿ ರೇಷನ್ ಕಾರ್ಡ್ e-KYC ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಸೇರಿದಂತೆ ತಾಂತ್ರಿಕ ಅಡಚಣೆಗಳ ಬಗ್ಗೆ ಫಲಾನುಭವಿಗಳಿಂದ ದೂರುಗಳು ಬಂದಿದ್ದವು.

ಮನೆಯಲ್ಲೇ e-KYC ಮಾಡುವ ಅವಕಾಶ : ‘ಅನ್ನ ಸೇವೆ’ ಯೋಜನೆ ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಯಾದ ಬಳಿಕ, ಅರ್ಹ ಪಡಿತರ ಚೀಟಿದಾರರು ಮೊಬೈಲ್ ಮೂಲಕವೇ e-KYC ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ಪಡೆಯಲಿದ್ದಾರೆ.

ಇದರಿಂದ ವಯೋವೃದ್ಧರು, ಉದ್ಯೋಗಕ್ಕೆ ತೆರಳುವವರು ಹಾಗೂ ದೂರದ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ ವಿಶೇಷ ಅನುಕೂಲವಾಗುವ ನಿರೀಕ್ಷೆಯಿದೆ. ಆದರೆ ಪ್ರಸ್ತುತ ಹಂತದಲ್ಲಿ ಆ್ಯಪ್‌ನ ಬಳಕೆ ಪೈಲಟ್ ಜಿಲ್ಲೆಗಳು ಮತ್ತು ಇಲಾಖೆಯ ನಿಗದಿತ ವ್ಯವಸ್ಥೆಗೆ ಸೀಮಿತವಾಗಿದ್ದು, ಅಕ್ಟೋಬರ್ 10ರಿಂದ ರಾಜ್ಯದ ಉಳಿದ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಇದೆ.

ಫಲಾನುಭವಿಗಳು ಅಧಿಕೃತವಾಗಿ ಸೌಲಭ್ಯ ಲಭ್ಯವಾದ ನಂತರವೇ ಆ್ಯಪ್ ಮೂಲಕ e-KYC ಪೂರ್ಣಗೊಳಿಸುವುದು ಸೂಕ್ತ. ರೇಷನ್ ಕಾರ್ಡ್ ಹಾಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಗುರುತಿನ ದೃಢೀಕರಣಕ್ಕೆ e-KYC ಪ್ರಮುಖವಾಗಿರುವ ಹಿನ್ನೆಲೆಯಲ್ಲಿ, ‘ಅನ್ನ ಸೇವೆ’ ಆ್ಯಪ್‌ನ ರಾಜ್ಯವ್ಯಾಪಿ ಜಾರಿ ಪ್ರಕ್ರಿಯೆ ಫಲಾನುಭವಿಗಳಿಗೆ ಮಹತ್ವದ ಡಿಜಿಟಲ್ ಸೌಲಭ್ಯವಾಗಲಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.