ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಇದು ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ನವೆಂಬರ್ 17 ಹಾಗೂ 18 ರಂದು ನಡೆಯಲಿರುವ ಕಾಮನ್ ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತೀಯ ಪ್ರಾದೇಶಿಕ ಸಮ್ಮೇಳನದ ಲೋಗೋವನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅನಾವರಣಗೊಳಿಸಿ ಮಾತನಾಡಿದರು.
ಈ ಹಿಂದೆ ರಾಜೀವ್ ಗಾಂಧಿ ಅವರು ಪಂಚಾಯತ್ನಿಂದ ಹಿಡಿದು ಜಿಲ್ಲಾ ಆಡಳಿತದವರೆಗೆ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ತಂದಿದ್ದರು. ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಪರವಾಗಿವೆ ಎನ್ನುವ ಅಭಿಪ್ರಾಯ ನನ್ನದು ಎಂದು ಹೇಳಿದರು.
ಆಡಳಿತದ ಆಯಕಟ್ಟಿನ ಹುದ್ದೆಗಳಲ್ಲಿ ಮಹಿಳೆಯರೇ ಮೇಲುಗೈ: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾಬಲ್ಯ ಸಂತೋಷಕರ ಸಂಗತಿ. ನಮ್ಮ ರಾಜ್ಯದ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗಳು, ವಿಧಾನಸಭೆ ಕಾರ್ಯದರ್ಶಿ, ವಿಧಾನ ಪರಿಷತ್ ಕಾರ್ಯದರ್ಶಿ ಹಾಗೂ ಉಪಸಭಾಪತಿಗಳ ಸ್ಥಾನದಲ್ಲಿ ಮಹಿಳೆಯರೇ ಇದ್ದಾರೆ. ಇವರೆಲ್ಲರಿಗೂ ನಮಸ್ಕರಿಸಿ ನಾವು ಕೆಲಸ ಮಾಡಿಸಿಕೊಳ್ಳುವಂತಹ ಸುಸಂದರ್ಭ ಒದಗಿಬಂದಿದೆ. ಹೆಣ್ಣು ಕುಟುಂಬದ ಕಣ್ಣು. ಮಹಿಳೆ ಸಬಲಳಾದರೆ ಪುರುಷರೂ ಸಬಲರಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಡಬ್ಲ್ಯೂಪಿ ಸಮ್ಮೇಳನ ಐತಿಹಾಸಿಕ ಮೈಲಿಗಲ್ಲು: ನವೆಂಬರ್ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊಟ್ಟಮೊದಲ ಸ್ವತಂತ್ರ ಕಾಮನ್ವೆಲ್ತ್ ಮಹಿಳಾ ಸಂಸದರ (CWP) ಭಾರತ ವಲಯದ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.
ಸಿಡಬ್ಲ್ಯೂಪಿ ಭಾರತ ವಲಯದ ಅಧ್ಯಕ್ಷೆ ಡಿ. ಪುರಂದೇಶ್ವರಿ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಕರ್ನಾಟಕದ ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದರು.
ನವೆಂಬರ್ 17 ಮತ್ತು 18 ರಂದು ನಡೆಯಲಿರುವ ಈ ಸಮಾವೇಶದಲ್ಲಿ ದೇಶ ಮತ್ತು ವಿದೇಶಗಳ ಸುಮಾರು 150ಕ್ಕೂ ಹೆಚ್ಚು ಮಹಿಳಾ ಸಂಸದರು, ಶಾಸಕರು ಹಾಗೂ ಸಭಾಧ್ಯಕ್ಷರು ಪಾಲ್ಗೊಳ್ಳಲಿದ್ದು, ದೇಶದ ಅಭಿವೃದ್ಧಿ ಮತ್ತು ಮಹಿಳಾ ಹಕ್ಕುಗಳ ರಕ್ಷಣೆಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಈ ಸಮ್ಮೇಳನದ ಯಶಸ್ಸಿಗೆ ವಿಧಾನಸಭಾ ಸ್ಪೀಕರ್ ಜಿ.ಎಸ್. ಪಾಟೀಲ್ ಮತ್ತು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರ ಮೂಲಕ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ನೆಹರು ಮತ್ತು ಇಂದಿರಾ ಗಾಂಧಿ ಸ್ಮರಣೆ: ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ ನೆಹರು ಅವರ ಆಶಯದಂತೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಲ್ಲದೆ, ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಧನೆಗಳು ಅಪಾರ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರುಗಳೇ ಸಾಕ್ಷಿ ಎಂದರು.





















