ಉಡುಪಿ: ಹಲವು ವರ್ಷಗಳಿಂದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ, ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಶನಿವಾರ ಉಡುಪಿಗೆ ಆಗಮಿಸಿದ್ದ. ನ್ಯಾಯಾಲಯದ ವಿಶೇಷ ಅನುಮತಿಯ ಮೇರೆಗೆ ಬೆಂಗಳೂರಿನಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿದ್ದ ಆತ, ಮಲ್ಪೆಯಲ್ಲಿ ನಡೆದ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಬಳಿಕ ಮತ್ತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ.
ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರಿ ಅವರು ನವೆಂಬರ್ 12ರಂದು ನಿಧನರಾಗಿದ್ದರು. ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ರವಿ ಪೂಜಾರಿ ನ್ಯಾಯಾಲಯದ ಮೊರೆ ಹೋಗಿದ್ದ. ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಪೊಲೀಸ್ ಭದ್ರತೆಯಲ್ಲಿ ಸ್ವಗ್ರಾಮಕ್ಕೆ ತೆರಳಲು ಅನುಮತಿ ನೀಡಿತ್ತು.
ಅದರಂತೆ ಬೆಂಗಳೂರಿನ ಸಿಟಿ ಆರ್ಮ್ಸ್ ರಿಸರ್ವ್ (ಸಿಎಆರ್) ಪೊಲೀಸರ ಎಸ್ಕಾರ್ಟ್ನಲ್ಲಿ ಆತನನ್ನು ಉಡುಪಿಗೆ ಕರೆತರಲಾಗಿತ್ತು. ಅಂತ್ಯಕ್ರಿಯೆ ಮುಗಿದ ತಕ್ಷಣ ವಾಪಸ್ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಜೈಲು ಇಲಾಖೆ ಬಿಗಿ ಭದ್ರತೆ ಕಲ್ಪಿಸಿದ್ದು, ಉಡುಪಿ ಜಿಲ್ಲಾ ಪೊಲೀಸರೂ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಿದ್ದರು.
ಎಸ್ಕಾರ್ಟ್ ಭದ್ರತೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿತ್ತು.
26 ವರ್ಷ ಭೂಗತ ಜಗತ್ತಿನಲ್ಲಿ ಸಕ್ರಿಯ: ಕೊಲೆ, ಕೊಲೆ ಯತ್ನ, ಸುಲಿಗೆ, ಹಫ್ತಾ ವಸೂಲಿ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲೇ 90ಕ್ಕೂ ಅಧಿಕ ಪ್ರಕರಣಗಳಿವೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದ ರವಿ ಪೂಜಾರಿಯನ್ನು 2019ರ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿಸಲಾಗಿತ್ತು. ಇದೀಗ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್ ಕಣ್ಗಾವಲಿನಲ್ಲಿ ಉಡುಪಿಗೆ ಆಗಮಿಸಿದ್ದಾನೆ.




















