SK Home Ad
Home ಸುದ್ದಿ ರಾಜ್ಯ ಪ್ರೀತಿಯಿಂದ ಆಹ್ವಾನಿಸಿ ಕೊನೆಗೆ ದೇವಸ್ಥಾನಕ್ಕೆ ಬೀಗ! ನಿಖಿಲ್‌ಗೆ ಆದ ಅವಮಾನವೇನು?

ಪ್ರೀತಿಯಿಂದ ಆಹ್ವಾನಿಸಿ ಕೊನೆಗೆ ದೇವಸ್ಥಾನಕ್ಕೆ ಬೀಗ! ನಿಖಿಲ್‌ಗೆ ಆದ ಅವಮಾನವೇನು?

0
3

ಬೆಂಗಳೂರು: ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರೂ, ತಾನು ಸ್ಥಳಕ್ಕೆ ತೆರಳಿದಾಗ ದೇವಸ್ಥಾನಕ್ಕೆ ಬೀಗ ಹಾಕಿ ಒಳಪ್ರವೇಶಿಸದಂತೆ ತಡೆಯುವ ಮೂಲಕ ಕೆಲ ಕಾಂಗ್ರೆಸ್ ಮುಖಂಡರು ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಎರಡು ವಾರಗಳ ಹಿಂದೆಯೇ ಪ್ರೀತಿಯಿಂದ ಕರೆ ಮಾಡಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಅದರಂತೆ ಕಾರ್ಯಕ್ರಮಕ್ಕೆ ತೆರಳಿದ್ದೆ. ಆದರೆ, ನಾನು ಬಂದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬೀಗ ಹಾಕಿ ಒಳಗೆ ಹೋಗದಂತೆ ತಡೆಯಲಾಯಿತು ಎಂದು ಅವರು ಘಟನೆ ವಿವರಿಸಿದ್ದಾರೆ.

ಈ ವೇಳೆ ಮೈಕ್ ಮೂಲಕ ಕ್ಷೇತ್ರದ ಶಾಸಕರ ಆಗಮನದ ಬಗ್ಗೆ ಘೋಷಣೆ ಮಾಡಲಾಗುತ್ತಿತ್ತು. ಶಾಸಕರು ಬರಲಿ, ನಾವೂ ಬರಲಿ, ಎಲ್ಲರೂ ದೇವರ ಮುಂದೆ ಸಮಾನರೇ. ಇದರಲ್ಲಿ ಅಷ್ಟು ದೊಡ್ಡ ವಿಚಾರ ಮಾಡುವ ಅಗತ್ಯವೇನಿದೆ ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದೆ. ದೇವರಿಗೆ ಕೈಮುಗಿದು ಗೌರವದಿಂದ ವಾಪಸ್ ತೆರಳುತ್ತೇನೆ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗುವುದು ಬೇಡ ಎಂದು ಮನವಿ ಮಾಡಿದ್ದರೂ ಅವರು ಅದಕ್ಕೆ ಸ್ಪಂದಿಸಲಿಲ್ಲ. ಕೊನೆಗೆ ದೇವಸ್ಥಾನದ ಕೀಲಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರಿಂದ ರಾತ್ರಿ 8ರಿಂದ 9 ಗಂಟೆಯವರೆಗೂ ಸ್ಥಳೀಯರು ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರೊಂದಿಗೆ ಮಾತುಕತೆ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ.

ಪೊಲೀಸರ ಗೈರಿಗೆ ನಿಖಿಲ್ ಅಸಮಾಧಾನ: ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿಗಳು ಇರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಗಲಾಟೆ ನಡೆದರೂ ಒಬ್ಬ ಪೊಲೀಸ್ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಕನಿಷ್ಠ ಸರ್ಕಲ್ ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಯಾದರೂ ಸ್ಥಳಕ್ಕೆ ಬರಬೇಕಿತ್ತು. ಪೊಲೀಸರ ಈ ಗೈರುಹಾಜರಿ ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.