G7 ಶೃಂಗಸಭೆ ಫೋಟೋ ವಿವಾದ: ಟ್ರಂಪ್ ವಿರುದ್ಧ ಜಾರ್ಜಿಯಾ ಮೆಲೋನಿ ಕಿಡಿ – ವಿದೇಶಾಂಗ ಸಚಿವರ ಅಮೆರಿಕ ಪ್ರವಾಸ ರದ್ದು
ಇತ್ತೀಚಿನ G7 ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸಂಬಂಧದಲ್ಲಿ ಹೊಸ ಬಿರುಕು ಮೂಡಿರುವುದು ಬಹಿರಂಗವಾಗಿದೆ. ಫೋಟೋಗೆ ಪೋಸ್ ನೀಡುವ ವಿಚಾರದಲ್ಲಿ ಮೆಲೋನಿ ತಮ್ಮನ್ನು “ಬೇಡಿಕೊಂಡಿದ್ದರು” ಎಂದು ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಇಟಲಿ ಪ್ರಧಾನಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಟ್ರಂಪ್ ಅವರ ಹೇಳಿಕೆಗಳನ್ನು “ಸಂಪೂರ್ಣವಾಗಿ ಕಟ್ಟುಕಥೆ” ಎಂದು ತಳ್ಳಿಹಾಕಿದ್ದಾರೆ.
ಟ್ರಂಪ್ ಹೇಳಿದ್ದೇನು? : ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಇಟಾಲಿಯನ್ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಸಕ್ತಿ ತೋರಿದ್ದರು ಎಂದು ಹೇಳಿಕೊಂಡಿದ್ದರು. “ನಾನು ಅವಳೊಂದಿಗೆ ಮಾತನಾಡಬೇಕಾದ ಅಗತ್ಯವೇ ಇರಲಿಲ್ಲ. ಆದರೆ ಅವಳು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ತುಂಬಾ ಬಯಸಿದ್ದಳು. ಅವಳು ಬೇಡಿಕೊಂಡ ಕಾರಣ ನಾನು ಫೋಟೋಗೆ ಒಪ್ಪಿಕೊಂಡೆ” ಎಂದು ಟ್ರಂಪ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಹೇಳಿಕೆ ಹೊರಬಿದ್ದ ತಕ್ಷಣ ಇಟಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಇದನ್ನೂ ಓದಿ: ಅಡ್ಡಮತದಾನದ ಸತ್ಯಾಸತ್ಯತೆ ಪರಿಶೀಲನೆಗೆ BJP ತಂಡ ರಚನೆ
ಮೆಲೋನಿ ತಿರುಗೇಟು : ಶುಕ್ರವಾರ ಪ್ರತಿಕ್ರಿಯಿಸಿದ ಜಾರ್ಜಿಯಾ ಮೆಲೋನಿ, ಟ್ರಂಪ್ ಹೇಳಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರು. “ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣವಾಗಿ ಕಲ್ಪಿತ. ಇದು ನನಗೆ ನಿಜಕ್ಕೂ ಆಶ್ಚರ್ಯ ಉಂಟುಮಾಡಿದೆ. ಅಮೆರಿಕ ಅಧ್ಯಕ್ಷರು ತಮ್ಮ ಮಿತ್ರ ರಾಷ್ಟ್ರಗಳ ಬಗ್ಗೆ ಏಕೆ ಈ ರೀತಿ ವರ್ತಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ಇದು ಮೊದಲ ಸಲವೂ ಅಲ್ಲ” ಎಂದು ಮೆಲೋನಿ ಹೇಳಿದರು.
ಟ್ರಂಪ್ ನಡೆ ನಿರಾಶಾದಾಯಕ: ಪಶ್ಚಿಮ ರಾಷ್ಟ್ರಗಳ ಮಿತ್ರರಿಗಿಂತ ಅಮೆರಿಕದ ವಿರೋಧಿ ರಾಷ್ಟ್ರಗಳ ನಾಯಕರೊಂದಿಗೆ ಟ್ರಂಪ್ ಹೆಚ್ಚು ಸೌಮ್ಯವಾಗಿ ವರ್ತಿಸುತ್ತಾರೆ ಎಂಬ ಆರೋಪವನ್ನೂ ಅವರು ಮಾಡಿದರು. “ಅವರು ಅಮೆರಿಕ ಮತ್ತು ಪಶ್ಚಿಮದ ಶತ್ರುಗಳ ವಿರುದ್ಧ ಇದೇ ಮಟ್ಟದ ಕಠಿಣ ನಿಲುವು ತೋರಿಸುವುದಿಲ್ಲ. ಆದರೆ ಅವರ ನಾಯಕರಿಗೆ ಹೆಚ್ಚಿನ ಗೌರವ ಹಾಗೂ ದಯೆ ತೋರಿಸುತ್ತಾರೆ. ಇದು ನಿರಾಶಾದಾಯಕ” ಎಂದು ಮೆಲೋನಿ ಕಿಡಿಕಾರಿದರು.
ಇದನ್ನೂ ಓದಿ: ಬಂಡಾಯಗಾರರಿಗೆ ಶಾಕ್ ಕೊಟ್ಟ HDK : JDSನಲ್ಲಿ ‘Gen Z’ ಯುಗ
“ಇಟಲಿ ಎಂದಿಗೂ ಬೇಡಿಕೊಳ್ಳುವುದಿಲ್ಲ” : ತಮ್ಮ ಪ್ರತಿಕ್ರಿಯೆಯ ಅಂತ್ಯದಲ್ಲಿ ಮೆಲೋನಿ ಅತ್ಯಂತ ತೀಕ್ಷ್ಣ ಸಂದೇಶವೊಂದನ್ನು ನೀಡಿದರು. “ಒಂದು ವಿಷಯವನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಅಥವಾ ಇಟಲಿ ಯಾರ ಮುಂದೆಯೂ ಎಂದಿಗೂ ಬೇಡಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆ ಇಟಲಿಯ ರಾಷ್ಟ್ರೀಯ ಗೌರವ ಮತ್ತು ಸ್ವಾಭಿಮಾನವನ್ನು ಪ್ರತಿಬಿಂಬಿಸುವ ಸಂದೇಶವಾಗಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಹದಗೆಡುತ್ತಿರುವ ಸಂಬಂಧ? : ಒಂದು ಕಾಲದಲ್ಲಿ ಯುರೋಪ್‌ನಲ್ಲಿ ಟ್ರಂಪ್ ಅವರ ಅತ್ಯಂತ ನಿಕಟ ರಾಜಕೀಯ ಬೆಂಬಲಿಗರಲ್ಲಿ ಜಾರ್ಜಿಯಾ ಮೆಲೋನಿ ಪ್ರಮುಖರಾಗಿದ್ದರು. 2025ರಲ್ಲಿ ನಡೆದ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಏಕೈಕ ಯುರೋಪಿಯನ್ ನಾಯಕಿಯೂ ಅವರೇ ಆಗಿದ್ದರು. ಆದರೆ ಇರಾನ್ ಕುರಿತ ಸಂಘರ್ಷ, ಪೋಪ್ ಲಿಯೋ ಅವರ ಕುರಿತು ಟ್ರಂಪ್ ನೀಡಿದ್ದ ಟೀಕೆ ಹಾಗೂ ಮಧ್ಯಪ್ರಾಚ್ಯ ಯುದ್ಧದ ವಿಚಾರದಲ್ಲಿ ಇಬ್ಬರ ನಿಲುವುಗಳು ಭಿನ್ನವಾಗುತ್ತಿದ್ದಂತೆ ಸಂಬಂಧಗಳಲ್ಲಿ ಶೈತ್ಯ ಉಂಟಾಗಿತ್ತು.
ಇದನ್ನೂ ಓದಿ: CID ಬಲೆಗೆ ಬಿದ್ದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್
ಇತ್ತೀಚಿನ ಫೋಟೋ ವಿವಾದವು ಆ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಬಹಿರಂಗಗೊಳಿಸಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಯುರೋಪ್ ಮತ್ತು ಅಮೆರಿಕದ ಬಲಪಂಥೀಯ ರಾಜಕೀಯ ಶಕ್ತಿಗಳ ನಡುವಿನ ಪ್ರಮುಖ ಮೈತ್ರಿಯಲ್ಲಿ ಬಿರುಕು ಮೂಡುತ್ತಿರುವ ಸೂಚನೆಯಾಗಿ ಈ ಬೆಳವಣಿಗೆಯನ್ನು ನೋಡಲಾಗುತ್ತಿದೆ.
ವಿದೇಶಾಂಗ ಸಚಿವರ ಅಮೆರಿಕ ಪ್ರವಾಸ ರದ್ದು : ಟ್ರಂಪ್ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಜೂನ್ 21 ಮತ್ತು 22ರಂದು ಅಮೆರಿಕಕ್ಕೆ ನಿಗದಿಯಾಗಿದ್ದ ಭೇಟಿಯನ್ನು ರದ್ದುಗೊಳಿಸಿರುವುದಾಗಿ ಅವರು ಘೋಷಿಸಿದರು.
ಇದನ್ನೂ ಓದಿ: ಒಡಿಶಾ ಪಠ್ಯಪುಸ್ತಕಗಳಲ್ಲಿ 1,678 ದೋಷಗಳು: ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ
“ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಉದ್ದೇಶಿಸಿ ಅಧ್ಯಕ್ಷ ಟ್ರಂಪ್ ಮಾಡಿದ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಹೇಳಿಕೆಗಳು ಇಡೀ ಇಟಲಿಯನ್ನೇ ಕೆರಳಿಸಿವೆ. ಈ ಕಾರಣದಿಂದ ನಾನು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ” ಎಂದು ತಜಾನಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಜಾಗತಿಕ ಗಮನ ಸೆಳೆದ ಮಾತಿನ ಸಮರ : G7 ಶೃಂಗಸಭೆಯ ವಿಡಿಯೊ ದೃಶ್ಯಗಳಲ್ಲಿ ಟ್ರಂಪ್ ಮತ್ತು ಮೆಲೋನಿ ಸುದೀರ್ಘವಾಗಿ ಮಾತುಕತೆ ನಡೆಸುತ್ತಿರುವುದು ಕಂಡುಬಂದಿತ್ತು. ಆದರೆ ಆ ಮಾತುಕತೆಯನ್ನು ಟ್ರಂಪ್ ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದು, ಅದಕ್ಕೆ ಮೆಲೋನಿ ನೀಡಿರುವ ತೀಕ್ಷ್ಣ ಪ್ರತಿಕ್ರಿಯೆ ಈಗ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಾಜಿ ಶಾಸಕ, ಹಿರಿಯ ವಕೀಲ ಕೆ.ಆರ್. ಶ್ರೀನಿವಾಸಯ್ಯ ನಿಧನ
ಅಮೆರಿಕ ಹಾಗೂ ಇಟಲಿ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ಈ ವಾಗ್ವಾದದ ಪರಿಣಾಮ ಎಷ್ಟರ ಮಟ್ಟಿಗೆ ಬೀಳಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.






















