SK Home Ad
Home ನಮ್ಮ ಜಿಲ್ಲೆ ಬೆಳಗಾವಿ ರೈತರ ವಿಷಯದಲ್ಲಿ ರಾಜಕಾರಣ ಬೇಡ: ಶಶಿಕಾಂತ ಗುರೂಜಿ ಆಕ್ರೋಶ

ರೈತರ ವಿಷಯದಲ್ಲಿ ರಾಜಕಾರಣ ಬೇಡ: ಶಶಿಕಾಂತ ಗುರೂಜಿ ಆಕ್ರೋಶ

0
2

ಬೆಳಗಾವಿ: ‘ಕೇಂದ್ರ ಸರ್ಕಾರದ ವಿರುದ್ಧ ಹೆದ್ದಾರಿ ತಡೆದಾಗ ಇಲ್ಲದ ನಿಷೇಧಾಜ್ಞೆ, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದಾಗ ಜಾರಿಯಾಗುವುದೇಕೆ? ಕಬ್ಬಿಗೆ ಬೆಲೆ ಕೇಳುವ ರೈತರ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಪಾಲನ್ನೂ ಘೋಷಿಸಿ’ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಒತ್ತಾಯಿಸಿದರು.

ಕಬ್ಬಿನ ದರ ಕುರಿತು ಮಂಗಳವಾರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳು ಪ್ರತಿ ಟನ್‌ಗೆ 4,500 ಹಾಗೂ ರಾಜ್ಯ ಸರ್ಕಾರ 1,000 ಸೇರಿಸಿ ಒಟ್ಟು 5,500 ನೀಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯ ಮಂತ್ರಿಗಳೊಂದಿಗೆ ನೇರವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ‘ಕೇಂದ್ರದ ವಿರುದ್ಧದ ಹೋರಾಟದಲ್ಲಿ 48 ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದಾಗ ನಿಷೇಧಾಜ್ಞೆ ಇರಲಿಲ್ಲ. ರಾಜ್ಯ ಸರ್ಕಾರದಿಂದ ಹೆಚ್ಚುವರಿ ಹಣ ಕೇಳಿದಾಗ ಮಾತ್ರ ಸೆಕ್ಷನ್‌ಗಳ ಪ್ರಸ್ತಾಪ ಬರುತ್ತದೆ. ಈ ತಾರತಮ್ಯ ಏಕೆ?’ ಎಂದು ಪ್ರಶ್ನಿಸಿದ ಅವರು, ಹೋರಾಟವನ್ನು ನಿಯಂತ್ರಿಸಲು ನಿಷೇಧಾಜ್ಞೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಖಜಾನೆ ಖಾಲಿ ಎಂದರೆ ರೈತನ ಗತಿಯೇನು?: ಮುಖ್ಯಮಂತ್ರಿಗಳು ಖಜಾನೆ ಖಾಲಿ ಎಂದು ಹೇಳುತ್ತಿರುವುದನ್ನು ಪ್ರಸ್ತಾಪಿಸಿದ ಗುರೂಜಿ, ‘ಹಾಗಾದರೆ ರೈತರಿಗೆ ಒಂದು ರೂಪಾಯಿ ಕೊಡಲೂ ಸರ್ಕಾರಕ್ಕೆ ಸಾಮರ್ಥ್ಯವಿಲ್ಲವೇ ಎಂಬ ಅನುಮಾನ ಬರುತ್ತದೆ. ಇಷ್ಟೆಲ್ಲ ಹೋರಾಟ, ಪಾದಯಾತ್ರೆ ನಡೆದರೂ ರೈತರು ಮತ್ತೆ ಬೀದಿಗೆ ಬರುವ ಪರಿಸ್ಥಿತಿ ಮುಂದುವರಿಯಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆಗಳು ನೀಡಬಹುದಾದ ದರವೆಷ್ಟು, ಸರ್ಕಾರ ನೀಡುವ ನೆರವೆಷ್ಟು ಎಂಬುದನ್ನು ಸ್ಪಷ್ಟಪಡಿಸಬೇಕು. ಬುಧವಾರವೇ ಕಾರ್ಖಾನೆ ಮಾಲೀಕರ ಸಭೆ ಕರೆದು ಅವರ ನಿಲುವು ಪಡೆಯಬೇಕು. ಬಳಿಕ ರೈತರ ಮುಂದೆ ನಿರ್ದಿಷ್ಟ ಪ್ರಸ್ತಾವ ಇಡಬೇಕು ಎಂದು ಒತ್ತಾಯಿಸಿದರು.

ಇಳುವರಿ ಅರ್ಧಕ್ಕಿಳಿದಿದೆ, ಸಂಕಷ್ಟ ಕೇಳಿ: ‘ಪ್ರತಿ ವರ್ಷ ಎಕರೆಗೆ 50ರಿಂದ 60 ಟನ್ ಕಬ್ಬು ಬರುತ್ತಿತ್ತು. ಈ ಬಾರಿ 25 ರಿಂದ 30 ಟನ್ ಬಂದರೂ ಹೆಚ್ಚು ಎನ್ನುವ ಸ್ಥಿತಿ ಇದೆ. ನೀರಿಲ್ಲ, ವಿದ್ಯುತ್ ಸಮರ್ಪಕವಾಗಿಲ್ಲ. ಇಳುವರಿಯೂ ಕುಸಿದಿದೆ. ಇದರ ನಡುವೆ ಕಬ್ಬಿಗೆ ಬೆಂಕಿ ಬೀಳುತ್ತಿದೆ’ ಎಂದು ರೈತರ ಸಂಕಷ್ಟ ವಿವರಿಸಿದರು. ಬೆಳೆ ಉಳಿಸಿಕೊಳ್ಳುವ ಒತ್ತಡದಲ್ಲಿರುವ ರೈತರಿಗೆ ದರದ ಅನಿಶ್ಚಿತತೆಯೂ ಕಾಡುತ್ತಿದೆ. ಈ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಬಂಧನಕ್ಕೆ ಸಿದ್ಧ, ನಮಗೆ ಕಾನೂನು ಬೇಕು: ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ ಅವರು, ರೈತರು ಸ್ವಯಂಪ್ರೇರಿತವಾಗಿ ಬಂಧನಕ್ಕೆ ಒಳಗಾಗಲು ಸಿದ್ಧರಿದ್ದಾರೆ ಎಂದರು. ‘ಮುಖ್ಯಮಂತ್ರಿಗಳೊಂದಿಗೆ ಇಂದೇ ಮಾತನಾಡಿ. ಎಷ್ಟು ಹಣ ಕೊಡುತ್ತೀರಿ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿ. ರೈತರಿಗೆ ಸ್ಪಷ್ಟ ಭರವಸೆ ನೀಡಿ ಸಮಸ್ಯೆ ಬಗೆಹರಿಸಿ’ ಎಂದು ಸಚಿವರನ್ನು ಆಗ್ರಹಿಸಿದರು.