SK Home Ad
Home ಸುದ್ದಿ ದೇಶ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ: ಭಾರತ ಹ್ಯಾಟ್ರಿಕ್ ಸಾಧನೆ

ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ: ಭಾರತ ಹ್ಯಾಟ್ರಿಕ್ ಸಾಧನೆ

0
2

ನವದೆಹಲಿ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆಗೆ ಭಾರತ ಮಗದೊಮ್ಮೆ ಸರ್ವ ಸಮ್ಮತದಿಂದ ಆಯ್ಕೆಯಾಗಿದೆ. 130ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಸೇರಿದ್ದ 139ನೇ ಶೃಂಗಸಭೆಯಲ್ಲಿ ಭಾರತವನ್ನು ಪುನರಾಯ್ಕೆ ಮಾಡಲಾಗಿದೆ.

ಸತತ ಮೂರನೇ ಬಾರಿಗೆ ಐಎಸ್‌ಎ ಅಧ್ಯಕ್ಷತೆ ಭಾರತದ ಮಡಿಲಿಗೆ ಬಂದಿದ್ದು, ದೆಹಲಿಯ ಭಾರತ್ ಮಂಟಪದಲ್ಲಿ ಜರುಗುತ್ತಿರುವ ಶೃಂಗಸಭೆಯಲ್ಲಿ ಈ ಐತಿಹಾಸಿಕ ನಿರ್ಣಯಕ್ಕೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯ ರಾಷ್ಟ್ರಗಳು ಕರತಾಡನ ಗೈದು ಸಂತಸ ವ್ಯಕ್ತಪಡಿಸಿದವು.

130ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅತಿ ದೊಡ್ಡ ಸಮಾವೇಶದಲ್ಲಿ ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಅಗಾಧ ಸಾಧನೆಗೆ ಬಹುಪರಾಕ್ ಘೋಷಣೆ ಮೊಳಗಿತು.

ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಐಎಸ್ ಎ ಒಕ್ಕೂಟ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಭಾರತವನ್ನೇ ಮತ್ತೆ ಮರು ಆಯ್ಕೆ ಘೋಷಿಸಿದ್ದು ವಿಶೇಷವಾಗಿತ್ತು. ಭಾರತದ ಪಾಲಿಗಿದು ಐತಿಹಾಸಿಕ ದಿನವಾಗಿ ಕಂಗೊಳಿಸಿತು.

ಸೌರಶಕ್ತಿ, ಪವನ ಶಕ್ತಿ, ಹಸಿರು ಹೈಡ್ರೋಜನ್ ಹೀಗೆ ನವೀಕರಿಸಬಹುದಾದ ಇಂಧನದ ಭಾರತದ ಗುರಿ ಮೀರಿದ ಸಾಧನೆ, ಪೂರೈಕೆ ಬದ್ಧತೆ, ಸಿಒಪಿ-26ರಲ್ಲಿ 2030ರೊಳಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವ ಗುರಿ, 1 ಕೋಟಿ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಒದಗಿಸುವ ಸೂರ್ಯಘರ್ , ಕೃಷಿ ಪಂಪ್ ಸೆಟ್ ಗಳಿಗೆ ಪಿಎಂ ಕುಸುಮ್ ಯೋಜನೆ ಎಲ್ಲವನ್ನೂ ಕಂಡು ಬೆರಗಾದ ವಿದೇಶಗಳು ಸತತ ಮೂರನೇ ಬಾರಿ ಅಂತರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನೇ ಮರು ಆಯ್ಕೆ ಮಾಡಿವೆ.

ಸಚಿವ ಪ್ರಲ್ಹಾದ ಜೋಶಿ ಧನ್ಯವಾದ: ಸತತ ಮೂರನೇ ಬಾರಿ ಐಎಸ್ ಎ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನೇ ಸರ್ವ ಸಮ್ಮತದಿಂದ ಆಯ್ಕೆ ಮಾಡಿದ ಸದಸ್ಯ ರಾಷ್ಟ್ರಗಳಿಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅನಂತ ಅನಂತ ಧನ್ಯವಾದ ಅರ್ಪಿಸಿದರು.

ವಿದೇಶಗಳು ಸೌರಕ್ರಾಂತಿ ಮತ್ತು ನವೀಕರಿಸಬಹುದಾದ ಇಂಧನ ಮಹತ್ಸಾಧನೆಗಾಗಿ ಭಾರತದ ಮೇಲೆ ಅದಮ್ಯ ನಂಬಿಕೆಯಿಟ್ಟಿದ್ದು, ಮತ್ತೊಮ್ಮೆ ಭಾರತವನ್ನು ISA ಅಧ್ಯಕ್ಷತೆಯ ಮೂರನೇ ಅವಧಿಗೆ ಮರು ಆಯ್ಕೆ ಮಾಡಿದ ಎಲ್ಲಾ ಸದಸ್ಯ ದೇಶಗಳಿಗೆ ಅಭಿನಂದನೆ ಹಾಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವ ಜೋಶಿ ಹೇಳಿದರು.

ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸತತ ಮೂರನೇ ಬಾರಿ ಆಯ್ಕೆ ಮಾಡಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ಕ್ಷಣ. ಇದು ನಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿರುವ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಾಗತಿಕ ಸೌರ ಸಹಭಾಗಿತ್ವವನ್ನು ಬಲಪಡಿಸಲು ಮತ್ತು ಪ್ರತಿಯೊಂದು ದೇಶಕ್ಕೆ, ವಿಶೇಷವಾಗಿ ‘ಗ್ಲೋಬಲ್ ಸೌತ್’ (ಬೆಳೆಯುತ್ತಿರುವ ರಾಷ್ಟ್ರಗಳಿಗೆ) ತಲುಪುವಂತೆ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ಪ್ರತಿಪಾದಿಸಿದರು.

ಐಎಸ್‌ಎ ಸೌರ ಒಕ್ಕೂಟಕ್ಕೆ ಫ್ರಾನ್ಸ್ ಸಹ ಅಧ್ಯಕ್ಷ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸಹ-ಅಧ್ಯಕ್ಷ ಸ್ಥಾನವನ್ನು ಫ್ರಾನ್ಸ್ ಅಲಂಕರಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆಯಾದಂತೆ ಫ್ರಾನ್ಸ್ ಸಹ ಸತತ 3ನೇ ಬಾರಿಗೆ ಮರು ಆಯ್ಕೆಯಾಗಿದೆ.