SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಟ್ವಿಟರ್ ಪೋಸ್ಟರ್ ವಾರ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್‌ನಲ್ಲಿ ಜಯ

ಟ್ವಿಟರ್ ಪೋಸ್ಟರ್ ವಾರ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್‌ನಲ್ಲಿ ಜಯ

0
34

ಬೆಂಗಳೂರು: ಬಿಜೆಪಿಯ “ನಾನೂ ಕರಸೇವಕ, ನನ್ನನ್ನೂ ಬಂಧಿಸಿ” ಅಭಿಯಾನದ ಪೋಸ್ಟರ್‌ನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಎದುರಿಸುತ್ತಿದ್ದ ಮುಖ್ಯಮಂತ್ರಿ ಡಿ.ಕೆ.ಶಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಸಿಎಂ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.

1992ರ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು. ಇದನ್ನು ಖಂಡಿಸಿ ಬಿಜೆಪಿ ನಾಯಕರು ‘ನಾನೂ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್ ಅಭಿಯಾನ ಆರಂಭಿಸಿದ್ದರು. ಈ ಪೋಸ್ಟರ್‌ನ್ನು ಕಾಂಗ್ರೆಸ್ ನಾಯಕರು ತಿರುಚಿದ್ದಾರೆ ಎಂದು ಆರೋಪಿಸಿ ವಕೀಲ ಯೋಗೇಂದ್ರ ಹೊಡಘಟ್ಟ ಎಂಬುವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು.

ನಂತರ ಪೋಸ್ಟರ್ ಫೋರ್ಜರಿ ಮಾಡಲಾಗಿದೆ ಮತ್ತು ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಲಾಗಿದೆ ಎಂಬ ದೂರಿನ ಅನ್ವಯ, ಹೈಗ್ರೌಂಡ್ಸ್ ಪೊಲೀಸರು ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಬಿ.ಆರ್. ನಾಯ್ಡು ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆಶಿ: ತಮ್ಮ ವಿರುದ್ಧದ ಈ ಕಾನೂನು ಕ್ರಮವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಎಂ ಪರ ವಾದ ಮಂಡಿಸಿದ ವಕೀಲ ಹೆಚ್.ವಿ. ಪ್ರವೀಣ್ ಗೌಡ, “ಮುಖ್ಯಮಂತ್ರಿಗಳು ಸ್ವತಃ ಈ ಪೋಸ್ಟ್ ಮಾಡಿಲ್ಲ, ಇದರಲ್ಲಿ ನೇರ ಪಾತ್ರವಿಲ್ಲ” ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಈ ಹಿಂದೆ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಇದೀಗ ಸುದೀರ್ಘ ವಿಚಾರಣೆಯ ಬಳಿಕ ತನಿಖಾ ವರದಿಯನ್ನು ಪರಿಶೀಲಿಸಿ, ಡಿಕೆಶಿ ವಿರುದ್ಧದ ಇಡೀ ಪ್ರಕರಣವನ್ನೇ ಸಂಪೂರ್ಣವಾಗಿ ರದ್ದುಪಡಿಸಿ ಆದೇಶಿಸಿದೆ. ಇದರಿಂದಾಗಿ ಸಿಎಂ, ಡಿ.ಕೆ‌ ಶಿವಕುಮಾರ್ ನಿರಾಳರಾಗಿದ್ದಾರೆ.