ವಿಶ್ವಪ್ರಸಿದ್ಧ BTS ತಂಡದ ಸದಸ್ಯ ಜಂಗ್‌ಕುಕ್ ಸೇರಿದಂತೆ ಹಲವು ಗಣ್ಯರನ್ನು ಗುರಿಯಾಗಿಸಿಕೊಂಡು ನಡೆದಿದ್ದ 25 ಮಿಲಿಯನ್ ಡಾಲರ್ (ಸುಮಾರು 38 ಬಿಲಿಯನ್ KRW) ಮೊತ್ತದ ಬೃಹತ್ ಹ್ಯಾಕಿಂಗ್ ಹಗರಣದ ಮಾಸ್ಟರ್‌ಮೈಂಡ್‌ನನ್ನು ಕೊನೆಗೂ ದಕ್ಷಿಣ ಕೊರಿಯಾಕ್ಕೆ ಹಸ್ತಾಂತರಿಸಲಾಗಿದೆ. ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಅಡಗಿದ್ದ 40 ವರ್ಷದ ಚೀನೀ ಪ್ರಜೆಯನ್ನು ಸುದೀರ್ಘ ತನಿಖೆಯ ನಂತರ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವಂಚನೆ ನಡೆದಿದ್ದು ಹೇಗೆ?: ಸುದ್ದಿ ಪ್ರಕಾರ, ಈ ಸೈಬರ್ ಅಪರಾಧ ಸಿಂಡಿಕೇಟ್ ಆಗಸ್ಟ್ 2023 ಮತ್ತು ಏಪ್ರಿಲ್ 2025 ರ ನಡುವೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುತ್ತಿತ್ತು. ಬಜೆಟ್ ಮೊಬೈಲ್ ಫೋನ್ ವಾಹಕಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಮೂಲಕ ವೈಯಕ್ತಿಕ ಡೇಟಾವನ್ನು ಕದಿಯುತ್ತಿದ್ದ ಈ ಗುಂಪು, ಕದ್ದ ಗುರುತಿನ ಚೀಟಿಗಳ ಮೂಲಕ ನಕಲಿ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳನ್ನು ತೆರೆಯುತ್ತಿತ್ತು. ಜಂಗ್‌ಕುಕ್ ಮಿಲಿಟರಿ ಸೇವೆಯಲ್ಲಿದ್ದ ಅವಧಿಯನ್ನು ಬಳಸಿಕೊಂಡ ಹ್ಯಾಕರ್‌ಗಳು, ಹೆಸರಿನಲ್ಲಿ ಮೋಸದ ಬೋಕರೇಜ್ ಖಾತೆಗಳನ್ನು ತೆರೆದು ಸುಮಾರು $6 ಮಿಲಿಯನ್ ಮೌಲ್ಯದ 33,500 HYBE ಷೇರುಗಳನ್ನು ವರ್ಗಾಯಿಸಲು ಯತ್ನಿಸಿದ್ದರು.
ತಪ್ಪಿದ ಭಾರಿ ನಷ್ಟ: HYBE ಮತ್ತು ಬಿಗ್ ಹಿಟ್ ಮ್ಯೂಸಿಕ್ ಸಂಸ್ಥೆಗಳು ಸಮಯಪ್ರಜ್ಞೆ ಮೆರೆದು ಈ ಅನುಮಾನಾಸ್ಪದ ವಹಿವಾಟನ್ನು ತಕ್ಷಣವೇ ಪತ್ತೆಹಚ್ಚಿ ಸ್ಥಗಿತಗೊಳಿಸಿದವು. ಇದರಿಂದಾಗಿ ಯಾವುದೇ ಆರ್ಥಿಕ ನಷ್ಟ ಸಂಭವಿಸಲಿಲ್ಲ. ನಂತರ ಜಂಗ್‌ಕುಕ್ ಕಾನೂನು ಹೋರಾಟದ ಮೂಲಕ ತಮ್ಮ ಎಲ್ಲಾ ಷೇರುಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ಸೈಬರ್ ಜಾಲದ ಮತ್ತೊಬ್ಬ ಪ್ರಮುಖ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದೆ.
ವಿಶ್ವ ಪ್ರವಾಸದಲ್ಲಿ BTS ಬ್ಯುಸಿ: ತವರಿನಲ್ಲಿ ಇಷ್ಟೆಲ್ಲಾ ಕಾನೂನು ಗೊಂದಲಗಳಿದ್ದರೂ, ಜಂಗ್‌ಕುಕ್ ಮತ್ತು ಅವರ ತಂಡದ ಸದಸ್ಯರು ತಮ್ಮ ‘ARIRANG’ ವಿಶ್ವ ಪ್ರವಾಸದಲ್ಲಿ ಸಕ್ರಿಯರಾಗಿದ್ದಾರೆ. ಮೇ 10ರಂದು ಮೆಕ್ಸಿಕೋ ನಗರದಲ್ಲಿ ಯಶಸ್ವಿ ಪ್ರದರ್ಶನ ಮುಗಿಸಿರುವ ತಂಡವು ಅಲ್ಲಿನ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರನ್ನು ಭೇಟಿಯಾಗಿತ್ತು. ಇದೀಗ ಈ ಪ್ರವಾಸವು ಅಮೆರಿಕಕ್ಕೆ ಸ್ಥಳಾಂತರಗೊಳ್ಳಲಿದ್ದು, ಈ ಶನಿವಾರ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.























