ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹದಿನಾರನೇ ಆವೃತ್ತಿಯು ರೋಚಕ ಹಂತಕ್ಕೆ ತಲುಪಿದ್ದು, ಪ್ಲೇ-ಆಫ್ ರೇಸ್ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. 56ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ದಾಖಲಿಸಿದ 82 ರನ್‌ಗಳ ಭರ್ಜರಿ ಜಯವು ಅಂಕಪಟ್ಟಿಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಫಲಿತಾಂಶದಿಂದ ಹೈದರಾಬಾದ್ ಮೂರನೇ ಸ್ಥಾನಕ್ಕೆ ಕುಸಿದರೆ, ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಅಗ್ರಸ್ಥಾನದಲ್ಲಿ ಗುಜರಾತ್ ಅಧಿಪತ್ಯ: ಆರ್‌ಸಿಬಿಗೆ ಸವಾಲು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರಸ್ತುತ +0.551 ನೆಟ್ ರನ್-ರೇಟ್‌ನೊಂದಿಗೆ ಪ್ಲೇ-ಆಫ್ ಪ್ರವೇಶಿಸುವ 99.6% ಅವಕಾಶವನ್ನು ಹೊಂದಿದೆ. ಅಲ್ಲದೆ, ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸುವ ಸಂಭವನೀಯತೆ 84.5% ರಷ್ಟಿದೆ. ಇತ್ತ ಇಂದು ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿರುವ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ತಲುಪಲು 88.1% ಅವಕಾಶವಿದೆ. ಒಂದು ವೇಳೆ ಇಂದು ಆರ್‌ಸಿಬಿ ಸೋತರೆ, ಅಂಕಪಟ್ಟಿಯ ಕೆಳಭಾಗದಲ್ಲಿರುವ ತಂಡಗಳ ಹಾದಿ ಸುಗಮವಾಗಲಿದೆ.
ಹೈದರಾಬಾದ್ ಮತ್ತು ಪಂಜಾಬ್ ತಂಡಗಳ ಸ್ಥಿತಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟಾಪ್ 4 ತಲುಪಲು 76.8% ಅವಕಾಶ ಹೊಂದಿದ್ದರೂ, ಟಾಪ್ 2 ಸ್ಥಾನ ಪಡೆಯುವ ಸಾಧ್ಯತೆ ಕೇವಲ 35.5% ಕ್ಕೆ ಇಳಿಕೆಯಾಗಿದೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್, ಇನ್ನೂ 64.5% ಪ್ಲೇ-ಆಫ್ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದ್ರೆ ಅಗ್ರ ಎರಡು ಸ್ಥಾನಗಳ ರೇಸ್‌ನಲ್ಲಿ ಅವರು 28.8% ರಷ್ಟು ಮಾತ್ರ ಭರವಸೆ ಹೊಂದಿದ್ದಾರೆ.
ಕೆಳಹಂತದ ತಂಡಗಳ ಹೋರಾಟ: ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ (53.9%) ಮತ್ತು ರಾಜಸ್ಥಾನ್ ರಾಯಲ್ಸ್ (53.8%) ಪ್ಲೇ-ಆಫ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ (12.8%) ಮತ್ತು ಕೆಕೆಆರ್ (3.2%) ತಂಡಗಳ ಹಾದಿ ಅತ್ಯಂತ ಕಠಿಣವಾಗಿದೆ.
ಪ್ಲೇ-ಆಫ್ ವೇಳಾಪಟ್ಟಿ: ಮೇ 26 ರಿಂದ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಕ್ವಾಲಿಫೈಯರ್ ಮೇ 26 ರಂದು ನಡೆಯಲಿದೆ. ಮೇ 27 ಮತ್ತು 29 ರಂದು ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ನಡೆಯಲಿದ್ದು, ಮೇ 31 ರ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಹಾಫೈನಲ್ ಜರುಗಲಿದೆ.






















