SK Home Ad
Home ಸುದ್ದಿ ದೇಶ ಪುಣೆ ಪೋರ್ಷೆ ಪ್ರಕರಣ: ಚರ್ಚೆಗೆ ಗ್ರಾಸವಾದ ಸಂಭ್ರಮಾಚರಣೆಯ ವಿಡಿಯೋ

ಪುಣೆ ಪೋರ್ಷೆ ಪ್ರಕರಣ: ಚರ್ಚೆಗೆ ಗ್ರಾಸವಾದ ಸಂಭ್ರಮಾಚರಣೆಯ ವಿಡಿಯೋ

0
75

‘ಇದು ಸಾಮಾನ್ಯ ಜನರ ಅಪಹಾಸ್ಯ’; ವೈರಲ್ ವಿಡಿಯೋ ವಿರುದ್ಧ ಬಲಿಪಶು ಕುಟುಂಬ ಕಿಡಿ

ಪುಣೆ : ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದ 2024ರ ಪುಣೆ ಪೋರ್ಷೆ ಅಪಘಾತ ಪ್ರಕರಣ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಅಪಘಾತ ಪ್ರಕರಣದ ಆರೋಪಿ ಹದಿಹರೆಯದ ಬಾಲಕನ ತಂದೆ ವಿಶಾಲ್ ಅಗರ್ವಾಲ್ ಕುಟುಂಬ ಸದಸ್ಯರೊಂದಿಗೆ ಸಂಭ್ರಮಾಚರಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಹೊರಬಂದ ಬೆನ್ನಲ್ಲೇ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಸಂಭ್ರಮಾಚರಣೆ ವಿಡಿಯೋ ವೈರಲ್‌ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಶಾಲ್ ಅಗರ್ವಾಲ್ ಕುಟುಂಬ ಸದಸ್ಯರು ಮತ್ತು ಬಂಧುಗಳೊಂದಿಗೆ ರೆಸ್ಟೋರೆಂಟ್‌ನಲ್ಲಿ ನೃತ್ಯ ಮಾಡುತ್ತಿರುವುದು ಕಾಣಿಸುತ್ತದೆ. ಹಿನ್ನೆಲೆಯಲ್ಲಿ “ಬಂಬೈ ಸೆ ಆಯಾ ಮೇರಾ ದೋಸ್ತ್” ಹಾಡು ಕೇಳಿಬರುತ್ತಿದ್ದು, ವಿಶಾಲ್ ಅಗರ್ವಾಲ್ ಹೂವಿನ ಹಾರ ಹಾಗೂ ನೋಟುಗಳಿಂದ ತಯಾರಿಸಿದ ಹಾರ ಧರಿಸಿರುವುದು ದೃಶ್ಯಗಳಲ್ಲಿ ಗೋಚರಿಸಿದೆ. ಒಂದು ಹಂತದಲ್ಲಿ ಅವರ ಪುತ್ರ ಅವರನ್ನು ಎತ್ತಿಕೊಂಡು ಸಂಭ್ರಮಿಸುವ ದೃಶ್ಯವೂ ವೈರಲ್ ಆಗಿದೆ. ಕುಟುಂಬದ ಇತರ ಸದಸ್ಯರು ಚಪ್ಪಾಳೆ ತಟ್ಟಿ ಉತ್ಸಾಹ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: CBSE ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ನೋಟಿಸ್

ಬಲಿಪಶು ಕುಟುಂಬದ ಆಕ್ರೋಶ : ಈ ವಿಡಿಯೋಗೆ ಪ್ರತಿಕ್ರಿಯಿಸಿದ ಮೃತ ಯುವತಿ ಅಶ್ವಿನಿ ಕೋಷ್ಟ (Ashwini Koshta) ಅವರ ತಂದೆ ಸುರೇಶ್ ಕೋಷ್ಟ, ಆರೋಪಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವರು ಸಾಮಾನ್ಯ ನಾಗರಿಕರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಆರೋಪಿಗಳಿಗೆ ಕಾನೂನಿನ ಬಗ್ಗೆ ಯಾವುದೇ ಭಯವಿಲ್ಲ” ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಬಾಲಾಪರಾಧಿಗಳ ಕುರಿತ ಕಾನೂನು ನಿಯಮಗಳನ್ನೂ ಪ್ರಶ್ನಿಸಿರುವ ಅವರು, ಇಂತಹ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಅಗತ್ಯ ಎಂದು ಆಗ್ರಹಿಸಿದ್ದಾರೆ. “ಜನರಲ್ಲಿ ಕಾನೂನಿನ ಭಯ ಮೂಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಬೇಕು” ಎಂದು ಅವರು ಹೇಳಿದ್ದಾರೆ.

ಜಾಮೀನು ರದ್ದುಗೊಳಿಸುವಂತೆ ಆಗ್ರಹ : ಸುರೇಶ್ ಕೋಷ್ಟ ಅವರು ಆರೋಪಿಗಳ ಜಾಮೀನು ರದ್ದುಗೊಳಿಸಬೇಕು ಹಾಗೂ ಸಾಕ್ಷ್ಯ ನಾಶ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. “ಹೈಕೋರ್ಟ್ ನೀಡಿದ ಶಿಕ್ಷೆಯನ್ನು ನಂತರ ರದ್ದುಗೊಳಿಸಿದರೆ ತಪ್ಪು ಸಂದೇಶ ಹೋಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೋಚಿಂಗ್ ಸೆಂಟರ್ ಜಾಲ ಬಯಲು?: NEET ಪ್ರಕರಣದಲ್ಲಿ CBI ಭರ್ಜರಿ ಆ್ಯಕ್ಷನ್

ಮೇ 19, 2024ರ ಭೀಕರ ಅಪಘಾತ : ಈ ಘಟನೆ 2024ರ ಮೇ 19ರಂದು ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ನಡೆದಿತ್ತು. ಮದ್ಯದ ಅಮಲಿನಲ್ಲಿ ಪೋರ್ಷೆ ಕಾರು ಚಲಾಯಿಸುತ್ತಿದ್ದ 17 ವರ್ಷದ ಬಾಲಕ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಟಿ ವೃತ್ತಿಪರರು ಮೃತಪಟ್ಟಿದ್ದರು.

ಈ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಸಾಕ್ಷ್ಯ ನಾಶ, ತನಿಖೆ ಮೇಲೆ ಪ್ರಭಾವ ಬೀರುವ ಪ್ರಯತ್ನ ಸೇರಿದಂತೆ ಹಲವು ಆರೋಪಗಳ ಕುರಿತ ತನಿಖೆಗಳು ಆರಂಭಗೊಂಡಿದ್ದವು.