SK Home Ad
Home ಸುದ್ದಿ ದೇಶ ನೆಲಕ್ಕೆ ಬಡಿದು ಮಗು ಕೊಂದ ಆರೋಪಿಗೆ ಗಲ್ಲು ಶಿಕ್ಷೆ

ನೆಲಕ್ಕೆ ಬಡಿದು ಮಗು ಕೊಂದ ಆರೋಪಿಗೆ ಗಲ್ಲು ಶಿಕ್ಷೆ

0
76

ಲಕ್ನೋ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಒಂದೂವರೆ ವರ್ಷದ ಗಂಡು ಮಗುವನ್ನು ಕ್ರೂರವಾಗಿ ನೆಲಕ್ಕೆ ಬಡಿದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ 40 ದಿನಗಳಲ್ಲೇ ನ್ಯಾಯಾಲಯ ಮರಣದಂಡನೆ ವಿಧಿಸಿರುವ ಅಪರೂಪದ ತೀರ್ಪು ಹೊರಬಿದ್ದಿದೆ. ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯ ಆರೋಪಿ ಜಿತೇಂದ್ರ ಅಲಿಯಾಸ್ ವಿರಾಜ್ (25)ಗೆ ಗಲ್ಲು ಶಿಕ್ಷೆ ವಿಧಿಸಿದೆ.

ಕೊಲೆಯಾದ ಮಗುವನ್ನು ಆರವ್ ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆ, ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ನ್ಯಾಯಾಲಯ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರೀತಿಯ ಹೆಸರಿನಲ್ಲಿ ಕಿರುಕುಳ: ಪೊಲೀಸರ ಮಾಹಿತಿ ಪ್ರಕಾರ, ಶಿಕ್ಷಕಿಯಾಗಿರುವ ರತಿದೇವಿ (24) ಅವರು ಕೌಟುಂಬಿಕ ಕಲಹದಿಂದ ಗಂಡನಿಂದ ದೂರವಾಗಿ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು. ಇದೇ ವೇಳೆ ಕಿರಾಣಿ ಅಂಗಡಿ ನಡೆಸುತ್ತಿದ್ದ ಜಿತೇಂದ್ರ, ರತಿದೇವಿಯನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ.

ಆದರೆ, “ನನಗೆ ಈಗಾಗಲೇ ಮದುವೆಯಾಗಿದೆ. ನನಗೆ ಒಂದೂವರೆ ವರ್ಷದ ಮಗನಿದ್ದಾನೆ” ಎಂದು ರತಿದೇವಿ ಹಲವು ಬಾರಿ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದರಿಂದ ಜಿತೇಂದ್ರ ಆಕ್ರೋಶಗೊಂಡು, ಮಗುವೇ ತನ್ನ ಪ್ರೀತಿಗೆ ಅಡ್ಡಿಯಾಗಿದೆ ಎಂದು ಭಾವಿಸಿ ಭೀಕರ ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಚಾಕ್ಲೆಟ್ ಆಸೆ ತೋರಿಸಿ ಕರೆದೊಯ್ದು ಕೊಲೆ: ಕಳೆದ ಮೇ 31ರಂದು, ಮಗುವಿಗೆ ಚಾಕ್ಲೆಟ್ ಕೊಡಿಸುವುದಾಗಿ ಹೇಳಿ ಆರವ್‌ನನ್ನು ಮನೆ ಸಮೀಪದಿಂದ ಕರೆದುಕೊಂಡು ಹೋಗಿದ್ದ ಜಿತೇಂದ್ರ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗುವನ್ನು ಹಲವು ಬಾರಿ ನೆಲಕ್ಕೆ ಬಡಿದು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ.

ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದರು. ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದರು.

40 ದಿನದಲ್ಲೇ ತೀರ್ಪು: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ತ್ವರಿತ ವಿಚಾರಣೆ ನಡೆಸಿ ಕೇವಲ 40 ದಿನಗಳಲ್ಲೇ ತೀರ್ಪು ಪ್ರಕಟಿಸಿದೆ. ಮಗುವಿನ ಮೇಲಿನ ಅತ್ಯಂತ ಕ್ರೂರ ಕೃತ್ಯವಾಗಿರುವುದರಿಂದ ಇದನ್ನು “ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದು ಪರಿಗಣಿಸಿ ಮರಣದಂಡನೆ ವಿಧಿಸಿದೆ.

ಹರಿಯಾಣದಲ್ಲೂ ಮತ್ತೊಂದು ಅಮಾನವೀಯ ಕೃತ್ಯ: ಇದೇ ವೇಳೆ ಹರಿಯಾಣದ ರೊಹ್ಟಕ್‌ನಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸುರಭಿ (4) ಎಂಬ ಬಾಲಕಿ ಸ್ನೇಹಿತೆಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತಾಯಿಯೊಂದಿಗೆ ತೆರಳಿದ್ದಳು. ನಂತರ ಮದ್ಯದ ಅಮಲಿನಲ್ಲಿ ಅಲ್ಲಿಗೆ ಬಂದಿದ್ದ ತಂದೆ ಜಿತೇಂದ್ರ, ಬಾಲಕಿಯನ್ನು ಎತ್ತಿಕೊಂಡು ಹಲವು ಬಾರಿ ನೆಲಕ್ಕೆ ಎಸೆದು ಹಲ್ಲೆ ನಡೆಸಿದ್ದಾನೆ.

ಈ ಘಟನೆ ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಆಧರಿಸಿ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಕ್ಷಮೆಯಾಚಿಸಿದ ಆರೋಪಿ: ಬಂಧನದ ಬಳಿಕ ಜಿತೇಂದ್ರ ತನ್ನ ಕೃತ್ಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ. ಇತ್ತ ಬಾಲಕಿಯ ತಾಯಿಯೂ ತನ್ನ ಪತಿಗೆ ಕಠಿಣ ಶಿಕ್ಷೆ ವಿಧಿಸಬಾರದು ಎಂದು ಪೊಲೀಸರ ಬಳಿ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಸದ್ಯ ಗಾಯಗೊಂಡಿರುವ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.