SK Home Ad
Home ನಮ್ಮ ಜಿಲ್ಲೆ ಯುವಜನತೆಗೆ ಉದ್ಯೋಗಾವಕಾಶ: 572 VAO ಹುದ್ದೆಗಳ ನೇಮಕಾತಿ

ಯುವಜನತೆಗೆ ಉದ್ಯೋಗಾವಕಾಶ: 572 VAO ಹುದ್ದೆಗಳ ನೇಮಕಾತಿ

0
66

ಕರ್ನಾಟಕದಲ್ಲಿ ಒಟ್ಟು 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಜುಲೈ 30ರೊಳಗೆ ಕೆಇಎ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರು: ಕೌಶಲ್ಯ, ಸಾಮರ್ಥ್ಯ ಹಾಗೂ ಪ್ರತಿಭೆ ಹೊಂದಿರುವ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಿ, ಉತ್ತಮ ಭವಿಷ್ಯ ರೂಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳ ಉಳಿಕೆ ಮೂಲ ವೃಂದದಲ್ಲಿ ಖಾಲಿಯಿರುವ ಗ್ರೂಪ್-ಸಿ ವೃಂದದ ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಪೊಲೀಸ್ ಇಲಾಖೆಗೆ 107 ಹೊಸ ವಾಹನಗಳ ಬಲ ನೀಡಿದ CM

ಒಟ್ಟು 572 ಹುದ್ದೆಗಳ ಭರ್ತಿ : ರಾಜ್ಯದಲ್ಲಿ ಒಟ್ಟು 572 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 67 ಹುದ್ದೆಗಳು ಮೀಸಲಾಗಿವೆ. ಈ ನೇಮಕಾತಿಯ ಮೂಲಕ ಗ್ರಾಮ ಮಟ್ಟದಲ್ಲಿ ಆಡಳಿತ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಯಾರು ಅರ್ಜಿ ಸಲ್ಲಿಸಬಹುದು? : ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಈ ಬಾರಿ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ಅನ್ವಯವಾಗುವಂತೆ ಐದು ವರ್ಷಗಳ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ: Pocso ಪ್ರಕರಣದ ಆರೋಪಿಯ ಭೀಕರ ಪ್ರತೀಕಾರ: 6 ಜೀವ ಬಲಿ

ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. https://cetonline.karnataka.gov.in/kea/ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜುಲೈ 30ರ ವರೆಗೆ ಕಾಲಾವಕಾಶ ಇರಲಿದೆ. ಅಭ್ಯರ್ಥಿಗಳು ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಯುವಕರಿಗೆ ಸುವರ್ಣಾವಕಾಶ : ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಯುವಕರಿಗೆ ಇದು ಒಂದು ಸುವರ್ಣಾವಕಾಶವಾಗಿದೆ ಎಂದು ಡಾ.ಜಿ. ಪರಮೇಶ್ವರ ಹೇಳಿದ್ದಾರೆ. “ಅಗತ್ಯ ತಯಾರಿ ನಡೆಸಿ, ನಿಮ್ಮ ಕನಸನ್ನು ನನಸಾಗಿಸಿಕೊಳ್ಳುವತ್ತ ದಾಪುಗಾಲಿಡಿ. ಯುವಜನತೆ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಅವರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ‘ಕರಾವಳಿ’ ವಿವಾದ ಏನೇ ಇರಲಿ ಸಿನಿಮಾ ಗೆಲ್ಲಿಸಿ: ಪ್ರಜ್ವಲ್ ಮನವಿ

ರಾಜ್ಯ ಸರ್ಕಾರದ ಈ ನೇಮಕಾತಿ ಪ್ರಕ್ರಿಯೆಯಿಂದ ಗ್ರಾಮೀಣ ಆಡಳಿತ ವ್ಯವಸ್ಥೆಗೆ ಹೊಸ ಚೈತನ್ಯ ಸಿಗಲಿದ್ದು, ನಿರುದ್ಯೋಗಿ ಯುವಕರಿಗೆ ಉದ್ಯೋಗದ ಅವಕಾಶಗಳು ಹೆಚ್ಚಾಗಲಿವೆ.