SK Home Ad
Home ಸುದ್ದಿ ದೇಶ IAS ರಾಜೀನಾಮೆಯ ರಹಸ್ಯ ಬಿಚ್ಚಿಟ್ಟ ದಿವ್ಯಾ ಮಿತ್ತಲ್: ವಿಡಿಯೋ ವೈರಲ್!

IAS ರಾಜೀನಾಮೆಯ ರಹಸ್ಯ ಬಿಚ್ಚಿಟ್ಟ ದಿವ್ಯಾ ಮಿತ್ತಲ್: ವಿಡಿಯೋ ವೈರಲ್!

0
73

ನವದೆಹಲಿ/ಲಖನೌ: ಭಾರತೀಯ ಆಡಳಿತ ಸೇವೆಗೆ (IAS) ರಾಜೀನಾಮೆ ನೀಡಿ ಕೆಲ ದಿನಗಳಿಂದ ತಮ್ಮ ಮುಂದಿನ ನಡೆ ಕುರಿತು ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶ ಕೇಡರ್‌ನ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್, ಇದೀಗ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದ್ದಾರೆ. ಸೆಪ್ಟೆಂಬರ್ 29ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ತಮ್ಮ ನಿರ್ಧಾರದ ಕುರಿತು ಅವರು ವಿವರಿಸಿದ್ದಾರೆ.

‘ಕೆಲವು ದಿನಗಳ ಹಿಂದೆ IASಗೆ ರಾಜೀನಾಮೆ ನೀಡಿದ್ದೆ ಮತ್ತು ನಿಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಬಿಟ್ಟಿದ್ದೆ. ನನ್ನ ಮಾತನ್ನು ಈ ವಿಡಿಯೊದಲ್ಲಿ ಹೇಳಿದ್ದೇನೆ. ಇದು ನಿಮ್ಮ ಮಾತೂ ಎಂದು ತೋರುತ್ತಿದ್ದರೆ ವಾಟ್ಸ್‌ಆಪ್ ಮೂಲಕ ಸಂಪರ್ಕಿಸಿ’ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದೇ ಪೋಸ್ಟ್‌ನಲ್ಲಿ ಅವರು 9198956957 ಸಂಖ್ಯೆಗೆ ವಾಟ್ಸ್‌ಆಪ್ ಸಂದೇಶ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ವಿಡಿಯೊದಲ್ಲಿ ದಿವ್ಯಾ ಮಿತ್ತಲ್, ತಾವು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಯಾವುದೇ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದ್ದಾರೆ. ಬದಲಾಗಿ ಜನರೊಂದಿಗೆ ನೇರವಾಗಿ ಕೆಲಸ ಮಾಡಿ, ಸಾರ್ವಜನಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಸ್ವತಂತ್ರ ರಾಜಕೀಯ ವೇದಿಕೆಯನ್ನು ರೂಪಿಸುವ ಉದ್ದೇಶವನ್ನು ಅವರು ತಿಳಿಸಿದ್ದಾರೆ. ಅವರ ರಾಜಕೀಯ ಪಯಣ ಉತ್ತರ ಪ್ರದೇಶದಿಂದಲೇ ಆರಂಭವಾಗಲಿದೆ.

ಸುಮಾರು 13 ವರ್ಷಗಳ ಆಡಳಿತ ಸೇವೆಯ ಅನುಭವ ಹೊಂದಿರುವ ದಿವ್ಯಾ ಮಿತ್ತಲ್, ಅಧಿಕಾರದಲ್ಲಿದ್ದಾಗ ಎದುರಾದ ಕೆಲವು ಘಟನೆಗಳನ್ನು ತಮ್ಮ ನಿರ್ಧಾರಕ್ಕೆ ಕಾರಣವಾದ ಅನುಭವಗಳಾಗಿ ವಿವರಿಸಿದ್ದಾರೆ. ಗ್ರಾಮವೊಂದರಲ್ಲಿ ಐದನೇ ತರಗತಿಯ ನಂತರ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಶಾಲೆಯ ಅಗತ್ಯವಿತ್ತು. ನಿಯಮಾನುಸಾರ ಅನುಮೋದನೆ ದೊರೆತಿದ್ದರೂ ಹಲವು ವರ್ಷಗಳಾದರೂ ಕಾಮಗಾರಿ ಆರಂಭವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಸಮಸ್ಯೆ ಹಣ ಅಥವಾ ನಿಯಮಗಳದ್ದಲ್ಲ, ಅನುಷ್ಠಾನದ ಇಚ್ಛಾಶಕ್ತಿಯದ್ದಾಗಿತ್ತು ಎಂಬುದು ಅವರ ವಾದ.

ಇದೇ ರೀತಿ, ಸರ್ಕಾರಿ ಭೂಮಿ ಮಂಜೂರಾಗಿದ್ದರೂ ಫಲಾನುಭವಿಗೆ ಅದರ ಭೌತಿಕ ಸ್ವಾಧೀನ ದೊರೆಯದ ಪ್ರಕರಣವೊಂದನ್ನೂ ಅವರು ಉಲ್ಲೇಖಿಸಿದ್ದಾರೆ. ಪರಿಶೀಲನೆ ವೇಳೆ ವರದಿಯಲ್ಲಿ ಅಕ್ರಮಗಳು ಕಂಡುಬಂದಿದ್ದವು ಎಂದು ಹೇಳಿದ ಅವರು, ಕ್ರಮ ಕೈಗೊಂಡ ಬಳಿಕವೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯದಿರುವುದನ್ನು ಪ್ರಶ್ನಿಸಿದ್ದಾರೆ.

ಗ್ರಾಮೀಣ ಪ್ರದೇಶಗಳ ರಸ್ತೆ ಮತ್ತು ಸೇತುವೆಗಳ ಸಮಸ್ಯೆ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಉದ್ಯೋಗ, ನೇಮಕಾತಿ ವಿಳಂಬ ಹಾಗೂ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿನ ರಾಜಕೀಯ ಕಾರ್ಯಸೂಚಿಯಲ್ಲಿ ಗಮನಿಸುವುದಾಗಿ ದಿವ್ಯಾ ಮಿತ್ತಲ್ ಹೇಳಿದ್ದಾರೆ. ಜನರ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದರೂ ಪರಿಹಾರವಾಗದ ಸಂದರ್ಭಗಳ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.

ರಾಜಕೀಯವನ್ನು ಕೇವಲ ಅಧಿಕಾರ ಅಥವಾ ಸ್ಥಾನ ಪಡೆಯುವ ಮಾರ್ಗವಾಗಿ ನೋಡದೆ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ವೇದಿಕೆಯಾಗಿ ಬಳಸಲು ಬಯಸುವುದಾಗಿ ಅವರು ಹೇಳಿದ್ದಾರೆ. ಶಿಕ್ಷಕರು, ರೈತರು, ವಿದ್ಯಾರ್ಥಿಗಳು, ವೈದ್ಯರು, ಕಾರ್ಮಿಕರು, ವಕೀಲರು ಸೇರಿದಂತೆ ವಿವಿಧ ವರ್ಗಗಳ ಜನರು ತಮ್ಮ ಪ್ರಯತ್ನದಲ್ಲಿ ಕೈಜೋಡಿಸುವಂತೆ ಅವರು ಕರೆ ನೀಡಿದ್ದಾರೆ.

ದಿವ್ಯಾ ಮಿತ್ತಲ್ ಅವರು 2013 ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್ IAS ಅಧಿಕಾರಿಯಾಗಿದ್ದು, ಆಗಸ್ಟ್ 30, 2026ರಂದು ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾಗಿತ್ತು. ರಾಜೀನಾಮೆಯ ಬಳಿಕ ಅವರ ಮುಂದಿನ ನಡೆ ಕುರಿತು ರಾಜಕೀಯ ಪ್ರವೇಶ ಸೇರಿದಂತೆ ಹಲವು ಊಹಾಪೋಹಗಳು ಹರಿದಾಡಿದ್ದವು. ಸೆಪ್ಟೆಂಬರ್ 27ರಂದು ಅವರು ಸೆಪ್ಟೆಂಬರ್ 29ರಂದು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ್ದರು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.