SK Home Ad
Home ಸುದ್ದಿ ದೇಶ Paytm ಪೇಮೆಂಟ್ಸ್ ಬ್ಯಾಂಕ್‌ಗೆ ಸಂಕಷ್ಟ ಮುಂದುವರಿಕೆ: ಬ್ಯಾಂಕಿಂಗ್ ಅಧ್ಯಾಯಕ್ಕೆ ಮತ್ತೊಂದು ತಿರುವು

Paytm ಪೇಮೆಂಟ್ಸ್ ಬ್ಯಾಂಕ್‌ಗೆ ಸಂಕಷ್ಟ ಮುಂದುವರಿಕೆ: ಬ್ಯಾಂಕಿಂಗ್ ಅಧ್ಯಾಯಕ್ಕೆ ಮತ್ತೊಂದು ತಿರುವು

0
40
Paytm ಪೇಮೆಂಟ್ಸ್ ಬ್ಯಾಂಕ್‌ಗೆ ಮತ್ತೊಂದು ಆಘಾತ: ಆರ್‌ಬಿಐ ಅಧಿಕೃತ ಪಟ್ಟಿಯಿಂದಲೇ ಔಟ್!

ನವದೆಹಲಿ: Paytm Payments Bank Limited (PPBL) ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ, 1934ರ ಎರಡನೇ ವೇಳಾಪಟ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತವಾಗಿ ಹೊರಗಿಟ್ಟಿದೆ. ಇದರೊಂದಿಗೆ Paytm Payments Bank ಇನ್ನು ‘Scheduled Bank’ಗಳ ಪಟ್ಟಿಯಲ್ಲಿರುವುದಿಲ್ಲ ಎಂದು RBI ಪ್ರಕಟಿಸಿದೆ.

RBI ಪ್ರಕಾರ, Paytm Payments Bank ಅನ್ನು ಎರಡನೇ ವೇಳಾಪಟ್ಟಿಯಿಂದ ಹೊರಗಿಡುವ ಅಧಿಸೂಚನೆಯನ್ನು ಜುಲೈ 31, 2026ರಂದು ಹೊರಡಿಸಲಾಗಿತ್ತು. ಈ ಅಧಿಸೂಚನೆ ಸೆಪ್ಟೆಂಬರ್ 7, 2026ರಂದು ಭಾರತ ಸರ್ಕಾರದ ರಾಜಪತ್ರದಲ್ಲಿ ಪ್ರಕಟಗೊಂಡಿದೆ.

ಏನಿದು ‘Second Schedule’? : ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯ ಎರಡನೇ ವೇಳಾಪಟ್ಟಿಯಲ್ಲಿ RBI ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವ ಮತ್ತು ‘Scheduled Bank’ ಎಂದು ಗುರುತಿಸಲ್ಪಟ್ಟ ಬ್ಯಾಂಕ್‌ಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಈ ಪಟ್ಟಿಯಿಂದ PPBL ಹೆಸರನ್ನು ತೆಗೆದುಹಾಕಿರುವುದು, ಈಗಾಗಲೇ ಬ್ಯಾಂಕ್ ವಿರುದ್ಧ ಕೈಗೊಳ್ಳಲಾಗಿರುವ ನಿಯಂತ್ರಣ ಕ್ರಮಗಳ ಮುಂದುವರಿದ ಭಾಗವಾಗಿದೆ.

ಲೈಸೆನ್ಸ್ ಈಗಾಗಲೇ ರದ್ದಾಗಿತ್ತು : Paytm Payments Bankನ ಬ್ಯಾಂಕಿಂಗ್ ಲೈಸೆನ್ಸ್ ಅನ್ನು RBI 2026ರ ಏಪ್ರಿಲ್ 24ರಿಂದ ಜಾರಿಗೆ ಬರುವಂತೆ ರದ್ದುಪಡಿಸಿತ್ತು. ಬ್ಯಾಂಕಿನ ವ್ಯವಹಾರಗಳು ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದಿವೆ, ನಿಯಂತ್ರಣ ನಿಯಮಗಳ ಪಾಲನೆಯಲ್ಲಿ ಗಂಭೀರ ಲೋಪಗಳಿವೆ ಮತ್ತು ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ನ ಷರತ್ತುಗಳನ್ನು ಪಾಲಿಸಿಲ್ಲ ಎಂದು RBI ತಿಳಿಸಿತ್ತು. ಬ್ಯಾಂಕ್ ತಕ್ಷಣದಿಂದಲೇ ಬ್ಯಾಂಕಿಂಗ್ ವ್ಯವಹಾರ ಅಥವಾ ಹೆಚ್ಚುವರಿ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿತ್ತು.

ಇದಕ್ಕೂ ಮುನ್ನ 2022ರ ಮಾರ್ಚ್‌ನಲ್ಲಿ RBI, PPBLಗೆ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸುವುದನ್ನು ನಿಷೇಧಿಸಿತ್ತು. ನಂತರ 2024ರ ಜನವರಿ ಮತ್ತು ಫೆಬ್ರವರಿಯಲ್ಲಿ ಗ್ರಾಹಕರ ಖಾತೆಗಳು, ಪ್ರೀಪೇಯ್ಡ್ ಸಾಧನಗಳು ಮತ್ತು ವಾಲೆಟ್‌ಗಳಲ್ಲಿ ಹೊಸ ಠೇವಣಿ, ಕ್ರೆಡಿಟ್ ಅಥವಾ ಟಾಪ್-ಅಪ್ ಸ್ವೀಕರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ದೆಹಲಿ ಹೈಕೋರ್ಟ್‌ನಿಂದ Winding-up ಆದೇಶ: ಲೈಸೆನ್ಸ್ ರದ್ದಾದ ಬಳಿಕ Paytm Payments Bank ಅನ್ನು ಮುಚ್ಚುವ ಪ್ರಕ್ರಿಯೆಯೂ ಮುಂದುವರಿಯಿತು. ದೆಹಲಿ ಹೈಕೋರ್ಟ್ ಜುಲೈ 8 ಮತ್ತು ಜುಲೈ 22, 2026ರ ಆದೇಶಗಳ ಮೂಲಕ PPBL ಅನ್ನು winding up ಮಾಡುವಂತೆ ನಿರ್ದೇಶಿಸಿತ್ತು. ಈ ಪ್ರಕ್ರಿಯೆಗೆ ಮಾಜಿ SBI ಅಧಿಕಾರಿ ಗಿರಿಕುಮಾರ್ ಎಂ. ನಾಯರ್ ಅವರನ್ನು ಅಧಿಕೃತ ಲಿಕ್ವಿಡೇಟರ್ ಆಗಿ ನೇಮಿಸಲಾಗಿತ್ತು.

ಹೀಗಾಗಿ, ಎರಡನೇ ವೇಳಾಪಟ್ಟಿಯಿಂದ PPBL ಅನ್ನು ಹೊರಗಿಟ್ಟಿರುವ ಇತ್ತೀಚಿನ RBI ಕ್ರಮವು ಬ್ಯಾಂಕಿನ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ನಿಯಂತ್ರಣ ಕ್ರಮಗಳ ಮತ್ತೊಂದು ಪ್ರಮುಖ ಹಂತವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಈ ಕ್ರಮವು ಹೊಸದಾಗಿ ಬ್ಯಾಂಕಿಂಗ್ ಲೈಸೆನ್ಸ್ ರದ್ದುಗೊಳಿಸುವುದಲ್ಲ, ಏಪ್ರಿಲ್‌ನಲ್ಲೇ ಲೈಸೆನ್ಸ್ ರದ್ದಾಗಿದ್ದು, ಈಗ Scheduled Banks ಪಟ್ಟಿಯಿಂದ ಅಧಿಕೃತವಾಗಿ ಹೆಸರನ್ನು ತೆಗೆದುಹಾಕಲಾಗಿದೆ.