SK Home Ad
Home ಸುದ್ದಿ ದೇಶ E20 ಎಥೆನಾಲ್ ಇಂಧನದ ಆತಂಕಕ್ಕೆ ಬ್ರೇಕ್: ಕೇಂದ್ರ ಸರ್ಕಾರ ಸ್ಪಷ್ಟನೆ

E20 ಎಥೆನಾಲ್ ಇಂಧನದ ಆತಂಕಕ್ಕೆ ಬ್ರೇಕ್: ಕೇಂದ್ರ ಸರ್ಕಾರ ಸ್ಪಷ್ಟನೆ

0
176

E20 ಇಂಧನದ ಬಗ್ಗೆ ಹರಿದಾಡುತ್ತಿರುವ ಆತಂಕಗಳಿಗೆ ಸರ್ಕಾರದ ಉತ್ತರ ಏನು? E20 ಪೆಟ್ರೋಲ್ ಸುರಕ್ಷಿತವೇ? ಸರ್ಕಾರ ನೀಡಿದ ಅಂಕಿ-ಅಂಶಗಳೇನು?

ನವದೆಹಲಿ: ದೇಶದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol – EBP) ಯೋಜನೆಯು ವೈಜ್ಞಾನಿಕ ಅಧ್ಯಯನ, ತಾಂತ್ರಿಕ ಪರಿಶೀಲನೆ ಹಾಗೂ ವಿವಿಧ ಪಾಲುದಾರರ ಸಮಾಲೋಚನೆಯ ಮೂಲಕ ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ವಾಹನಗಳ ಎಂಜಿನ್, ಇಂಧನ ಪಂಪ್ ಅಥವಾ ಕಾರ್ಯಕ್ಷಮತೆಗೆ ಸಂಬಂಧಿಸಿದ ಯಾವುದೇ ವ್ಯಾಪಕ ಅಥವಾ ದೃಢೀಕೃತ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಎರಡು ದಶಕಗಳ ಯೋಜನೆಯ ಫಲ : ಸಚಿವರು ನೀಡಿದ ಮಾಹಿತಿಯ ಪ್ರಕಾರ, ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು NITI ಆಯೋಗ್, ಆಟೋಮೊಬೈಲ್ ತಯಾರಕರು, ತೈಲ ಮಾರುಕಟ್ಟೆ ಕಂಪನಿಗಳು (OMCs), ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI), ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP) ಸೇರಿದಂತೆ ಹಲವು ತಾಂತ್ರಿಕ ಸಂಸ್ಥೆಗಳ ಸಹಯೋಗದಲ್ಲಿ ರೂಪಿಸಲಾಗಿದೆ.

ಇದನ್ನೂ ಓದಿ: ತ್ರಿಪುರ DGP ಅನುರಾಗ್ ಧಂಕರ್ ನಿಗೂಢ ಸಾವು: ಆತ್ಮಹತ್ಯೆ ಶಂಕೆ

ಸುಮಾರು ಎರಡು ದಶಕಗಳ ಕಾಲ ನಡೆದ ಸಂಶೋಧನೆ, ಪರೀಕ್ಷೆ ಮತ್ತು ನೀತಿ ರೂಪಿಸುವ ಪ್ರಕ್ರಿಯೆಯ ಬಳಿಕ ಭಾರತವು ತನ್ನ ಮೂಲ ಗುರಿಗಿಂತ ಐದು ವರ್ಷ ಮುಂಚಿತವಾಗಿಯೇ 20% ಎಥೆನಾಲ್ ಮಿಶ್ರಣದ ಗುರಿ ಸಾಧಿಸಿದೆ.

ದೇಶಕ್ಕೆ ದೊರೆತ ಪ್ರಮುಖ ಲಾಭಗಳು : ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2014-15ರ ಎಥೆನಾಲ್ ಸರಬರಾಜು ವರ್ಷ (ESY)ದಿಂದ ಈ ಯೋಜನೆಯಿಂದ ದೇಶಕ್ಕೆ ಹಲವು ಮಹತ್ವದ ಲಾಭಗಳು ದೊರೆತಿವೆ. ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯ, 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲದ ಆಮದು ಕಡಿತ, 952 ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಡೈಆಕ್ಸೈಡ್ (CO₂) ಹೊರಸೂಸುವಿಕೆ ತಡೆ, ಭಾರತೀಯ ರೈತರಿಗೆ ₹1.66 ಲಕ್ಷ ಕೋಟಿಗೂ ಅಧಿಕ ಹೆಚ್ಚುವರಿ ಆದಾಯ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: IPS ತರಬೇತಿ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಈ ಯೋಜನೆಯು ದೇಶದ ಇಂಧನ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ರೈತರ ಆದಾಯ ಹೆಚ್ಚಿಸುವ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ವಾಹನಗಳಿಗೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ : E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ, ಇಂಧನ ಪಂಪ್‌ಗೆ ಹಾನಿಯಾಗುತ್ತದೆ, ತುಕ್ಕು ಉಂಟಾಗುತ್ತದೆ ಅಥವಾ ನೀರಿನ ಮಾಲಿನ್ಯದಿಂದ ಕಾರ್ಯಕ್ಷಮತೆ ಕುಸಿಯುತ್ತದೆ ಎಂಬ ಆತಂಕಗಳು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ವ್ಯಕ್ತವಾಗಿದ್ದವು.

ಇದನ್ನೂ ಓದಿ: ‘ನೀಟ್’ ಹಗರಣಕ್ಕೆ ಖರ್ಗೆ ಆಕ್ರೋಶ: ಸದನ ಕಲಾಪ ಮುಂದೂಡಿಕೆ!

ಆದರೆ, ಈ ಎಲ್ಲಾ ವಿಷಯಗಳನ್ನು ತಜ್ಞರ ಮೂಲಕ ವೈಜ್ಞಾನಿಕವಾಗಿ ಪರಿಶೀಲಿಸಲಾಗಿದೆ. ವಾಹನ ತಯಾರಕರು, ಆಟೋಮೊಬೈಲ್ ಸಂಘಟನೆಗಳು ಅಥವಾ ಗ್ರಾಹಕ ಸಂಘಗಳಿಂದ E20 ಇಂಧನದ ಕುರಿತು ಯಾವುದೇ ವ್ಯಾಪಕ ಅಥವಾ ಸಮರ್ಥನೀಯ ದೂರು ಸರ್ಕಾರಕ್ಕೆ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ವೈಜ್ಞಾನಿಕ ಪರಿಶೀಲನೆಯ ನಂತರ ಜಾರಿ : ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ಯಾವುದೇ ಆತುರದ ನಿರ್ಧಾರವಾಗಿ ಜಾರಿಗೊಳಿಸಿಲ್ಲ. ತಾಂತ್ರಿಕ ಪರೀಕ್ಷೆಗಳು, ಎಂಜಿನ್ ಹೊಂದಾಣಿಕೆ ಅಧ್ಯಯನಗಳು, ವಾಹನ ತಯಾರಕರ ಸಲಹೆಗಳು ಹಾಗೂ ವಿವಿಧ ಸಂಸ್ಥೆಗಳ ವರದಿಗಳನ್ನು ಪರಿಗಣಿಸಿದ ಬಳಿಕವೇ ದೇಶಾದ್ಯಂತ ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಬಾಹ್ಯಾಕಾಶ ಸಾಧನೆ ಬೆನ್ನಲ್ಲೇ 56ರ ‘ಯುವಕ’ನಿಗೆ ಮೋದಿ ಟಾಂಗ್!

ಕೇಂದ್ರದ ಪ್ರಕಾರ, ಇಂಧನ ಆಮದು ಅವಲಂಬನೆ ಕಡಿಮೆ ಮಾಡುವುದು, ಪರಿಸರ ಸ್ನೇಹಿ ಇಂಧನ ಬಳಕೆ ಹೆಚ್ಚಿಸುವುದು ಹಾಗೂ ರೈತರ ಆದಾಯ ವೃದ್ಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.