SK Home Ad
Home ಸುದ್ದಿ ದೇಶ QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ

QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ

0
67

QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಐಐಟಿ-ದೆಹಲಿ ಭಾರತದ ಅಗ್ರ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ್ದು, ಜಾಗತಿಕವಾಗಿ 118ನೇ ಸ್ಥಾನ ಪಡೆದಿದೆ. 52 ಭಾರತೀಯ ಸಂಸ್ಥೆಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ.

ನವದೆಹಲಿ: ಕ್ಯೂಎಸ್ (QS) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ-ದೆಹಲಿ (IIT Delhi) ದೇಶದ ಅತ್ಯುನ್ನತ ಶ್ರೇಯಾಂಕಿತ ವಿಶ್ವವಿದ್ಯಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು, ಜಾಗತಿಕ ಪಟ್ಟಿಯಲ್ಲಿ 118ನೇ ಸ್ಥಾನ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕಳೆದ ವರ್ಷದ ಹೋಲಿಕೆಯಲ್ಲಿ ಐದು ಸ್ಥಾನಗಳಷ್ಟು ಏರಿಕೆ ಕಂಡಿರುವ ಐಐಟಿ-ದೆಹಲಿ, ಯಾವುದೇ ಭಾರತೀಯ ಸಂಸ್ಥೆ ಇದುವರೆಗೆ ಸಾಧಿಸಿರುವ ಅತ್ಯುತ್ತಮ QS ಶ್ರೇಯಾಂಕಕ್ಕೆ ಸಮನಾಗಿದೆ. ಈ ಸಾಧನೆಯು ಭಾರತದ ಶೈಕ್ಷಣಿಕ ಗುಣಮಟ್ಟ, ಸಂಶೋಧನಾ ಸಾಮರ್ಥ್ಯ ಮತ್ತು ಜಾಗತಿಕ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದೆ.

ಇದನ್ನೂ ಓದಿ: ರೈಲ್ವೆ ಹುದ್ದೆ ಬಡ್ತಿ ಪರೀಕ್ಷೆ: ಕನ್ನಡದಲ್ಲಿ ಬರೆಯಲು ಮತ್ತೆ ನಿರಾಕರಣೆ

52 ಭಾರತೀಯ ಸಂಸ್ಥೆಗಳಿಗೆ QS ಪಟ್ಟಿಯಲ್ಲಿ ಸ್ಥಾನ : ಈ ಬಾರಿಯ QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಒಟ್ಟು 52 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. 2017ರಲ್ಲಿ ಕೇವಲ 14 ಭಾರತೀಯ ಸಂಸ್ಥೆಗಳು ಮಾತ್ರ ಈ ಪಟ್ಟಿಯಲ್ಲಿ ಇದ್ದರೆ, ಇದೀಗ ಆ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು 271 ಶೇಕಡಾ ಬೆಳವಣಿಗೆ ದಾಖಲಾಗಿದೆ.

ಈ ಮೂಲಕ ಭಾರತವು ವಿಶ್ವದಲ್ಲಿ ಐದನೇ ಅತಿ ಹೆಚ್ಚು ಪ್ರತಿನಿಧಿತ್ವ ಹೊಂದಿರುವ ಉನ್ನತ ಶಿಕ್ಷಣ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಜಿ-20 ರಾಷ್ಟ್ರಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯೆಂಬ ಹೆಗ್ಗಳಿಕೆಯೂ ಭಾರತಕ್ಕೆ ಸಿಕ್ಕಿದೆ.

ಅರ್ಧಕ್ಕಿಂತ ಹೆಚ್ಚು ಸಂಸ್ಥೆಗಳ ಶ್ರೇಯಾಂಕದಲ್ಲಿ ಸುಧಾರಣೆ : QS ವರದಿಯ ಪ್ರಕಾರ, ಈ ಬಾರಿ ಶ್ರೇಯಾಂಕ ಪಡೆದ 52 ಭಾರತೀಯ ಸಂಸ್ಥೆಗಳಲ್ಲಿ 26 ಸಂಸ್ಥೆಗಳು ತಮ್ಮ ಸ್ಥಾನವನ್ನು ಸುಧಾರಿಸಿಕೊಂಡಿವೆ. 9 ಸಂಸ್ಥೆಗಳು ಹಿಂದಿನ ಸ್ಥಾನವನ್ನು ಕಾಯ್ದುಕೊಂಡಿವೆ. 15 ಸಂಸ್ಥೆಗಳು ಕುಸಿತ ಕಂಡಿವೆ, 2 ಸಂಸ್ಥೆಗಳು ಮೊದಲ ಬಾರಿಗೆ ಪಟ್ಟಿಗೆ ಪ್ರವೇಶಿಸಿವೆ ಇದು ಭಾರತೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಮನ್ನಣೆಯ ಸಂಕೇತವಾಗಿದೆ.

ಇದನ್ನೂ ಓದಿ: ಅಂಕಣ ಬರಹ: ಲಂಚ ನಿರ್ಮೂಲನೆ ‘…ಬಾಯಲ್ಲಿ’ನ ಮಾತಾಗದಿರಲಿ!

NEP 2020 ಪರಿಣಾಮ – ಧರ್ಮೇಂದ್ರ ಪ್ರಧಾನ್ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಸಾಧನೆಯನ್ನು ಸ್ವಾಗತಿಸಿ, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅಡಿಯಲ್ಲಿ ಕೈಗೊಂಡ ಸುಧಾರಣೆಗಳ ಫಲಿತಾಂಶ ಇದಾಗಿದೆ ಎಂದು ಹೇಳಿದ್ದಾರೆ. ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 52 ವಿಶ್ವವಿದ್ಯಾಲಯಗಳು QS ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು, ದೇಶದ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪರಿವರ್ತನೆಯ ಸ್ಪಷ್ಟ ಸೂಚಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

IIT-ದೆಹಲಿಯ ಅದ್ಭುತ ಜಿಗಿತ : ಕಳೆದ ನಾಲ್ಕು ವರ್ಷಗಳಲ್ಲಿ ಐಐಟಿ-ದೆಹಲಿ ದಾಖಲೆಯ ಮಟ್ಟದಲ್ಲಿ ಪ್ರಗತಿ ಸಾಧಿಸಿದೆ. QS 2024ರಲ್ಲಿ: 197ನೇ ಸ್ಥಾನ ಇದ್ದದ್ದು QS 2027ರಲ್ಲಿ: 118ನೇ ಸ್ಥಾನಕ್ಕೆ ತಲುಪಿದೆ ಅಂದರೆ ಕೇವಲ ನಾಲ್ಕು ವರ್ಷಗಳಲ್ಲಿ 79 ಸ್ಥಾನಗಳ ಜಿಗಿತ ಕಂಡಿದೆ. ವಿಶೇಷವಾಗಿ ಉದ್ಯೋಗದಾತರ ವಿಶ್ವಾಸ (Employer Reputation) ವಿಭಾಗದಲ್ಲಿ ಐಐಟಿ-ದೆಹಲಿ ಜಾಗತಿಕವಾಗಿ 39ನೇ ಸ್ಥಾನಕ್ಕೇರಿದೆ. ಉದ್ಯೋಗ ಫಲಿತಾಂಶಗಳ (Employment Outcomes) ಸೂಚ್ಯಂಕದಲ್ಲಿಯೂ 60 ಸ್ಥಾನಗಳ ಏರಿಕೆ ದಾಖಲಿಸಿದೆ. ಇದಲ್ಲದೆ ಸಂಶೋಧನಾ ಗುಣಮಟ್ಟವನ್ನು ಅಳೆಯುವ “Citations per Faculty” ವಿಭಾಗದಲ್ಲೂ 26 ಸ್ಥಾನಗಳಷ್ಟು ಸುಧಾರಣೆ ಕಂಡಿದೆ.

ಇದನ್ನೂ ಓದಿ: ಮಾವು ಬೆಲೆ ಕುಸಿತ: PDPS ಜಾರಿಗೆ ಕೇಂದ್ರಕ್ಕೆ ಕುಮಾರಸ್ವಾಮಿ ಮನವಿ

ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಹೆಮ್ಮೆ : QS ವಿಷಯವಾರು ಶ್ರೇಯಾಂಕಗಳಲ್ಲಿಯೂ ಐಐಟಿ-ದೆಹಲಿ ಗಮನಾರ್ಹ ಸಾಧನೆ ಮಾಡಿದೆ. ಕೆಳಗಿನ ವಿಭಾಗಗಳು ವಿಶ್ವದ ಅಗ್ರ 50ರಲ್ಲಿ ಸ್ಥಾನ ಪಡೆದಿವೆ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಕೆಮಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ಹಾಗೂ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಐಐಟಿ-ದೆಹಲಿ ಜಾಗತಿಕವಾಗಿ 36ನೇ ಸ್ಥಾನ ಪಡೆದು ಭಾರತದ ಅಗ್ರ ಸಂಸ್ಥೆಯಾಗಿ ಮುಂದುವರಿದಿದೆ.

ಇತರ ಭಾರತೀಯ ಸಂಸ್ಥೆಗಳ ಸಾಧನೆ : ಐಐಟಿ-ದೆಹಲಿ ನಂತರ ಭಾರತದ ಪ್ರಮುಖ ಸಂಸ್ಥೆಗಳು IIT Bombay 134, IIT Madras 170, IIT Kharagpur 205, IIT Kanpur 221, Delhi University 322, Jamia Millia Islamia 686, IISc Bangalore#221

ಇದನ್ನೂ ಓದಿ: 232 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮುಂಬಡ್ತಿ

IIT ಮಾತ್ರವಲ್ಲ, ಖಾಸಗಿ ಸಂಸ್ಥೆಗಳೂ ಮಿಂಚಿದವು : ಈ ಬಾರಿ ಒಟ್ಟು 18 ಭಾರತೀಯ ವಿಶ್ವವಿದ್ಯಾಲಯಗಳು ತಮ್ಮ ಇತಿಹಾಸದಲ್ಲೇ ಅತ್ಯುತ್ತಮ ಜಾಗತಿಕ ಶ್ರೇಯಾಂಕವನ್ನು ದಾಖಲಿಸಿವೆ. ಆಶ್ಚರ್ಯಕರ ಸಂಗತಿ ಎಂದರೆ, ಅವುಗಳಲ್ಲಿ 13 ಸಂಸ್ಥೆಗಳು ಐಐಟಿ ಅಲ್ಲ. ವಿಶೇಷವಾಗಿ BITS Pilani, VIT University, Jamia Millia Islamia, JNU, Chandigarh University, Shoolini University ಉತ್ತಮ ಸಾಧನೆ ದಾಖಲಿಸಿ ಗಮನ ಸೆಳೆದಿವೆ.

ಸಂಶೋಧನೆ ಮತ್ತು ಉದ್ಯೋಗಾರ್ಹತೆಯಲ್ಲಿ ಭಾರತದ ಬಲ : QS ವರದಿಯ ಪ್ರಕಾರ 11 ಭಾರತೀಯ ವಿಶ್ವವಿದ್ಯಾಲಯಗಳು “Citations per Faculty” ವಿಭಾಗದಲ್ಲಿ ಜಾಗತಿಕ ಟಾಪ್ 100ರಲ್ಲಿ ಸ್ಥಾನ ಪಡೆದಿವೆ. 6 ಭಾರತೀಯ ಸಂಸ್ಥೆಗಳು “Employer Reputation” ವಿಭಾಗದಲ್ಲಿ ಜಾಗತಿಕ ಟಾಪ್ 100ರಲ್ಲಿ ಸ್ಥಾನ ಪಡೆದಿವೆ. ಇದು ಭಾರತೀಯ ಪದವೀಧರರ ಮೇಲಿನ ಉದ್ಯಮ ಕ್ಷೇತ್ರದ ವಿಶ್ವಾಸ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ

ಅಂತರರಾಷ್ಟ್ರೀಕರಣ ಇನ್ನೂ ಸವಾಲು : ಸಾಧನೆಗಳ ನಡುವೆಯೂ ಭಾರತೀಯ ವಿಶ್ವವಿದ್ಯಾಲಯಗಳಿಗೆ ಅಂತರರಾಷ್ಟ್ರೀಕರಣ ಇನ್ನೂ ಪ್ರಮುಖ ಸವಾಲಾಗಿ ಉಳಿದಿದೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ವಿದೇಶಿ ಅಧ್ಯಾಪಕರನ್ನು ಆಕರ್ಷಿಸುವ ವಿಷಯದಲ್ಲಿ ಭಾರತ ಇನ್ನೂ ಅನೇಕ ಜಾಗತಿಕ ವಿಶ್ವವಿದ್ಯಾಲಯಗಳಿಗಿಂತ ಹಿಂದೆ ಇದೆ. ಜಾಗತಿಕ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಸುಧಾರಣೆ ಅಗತ್ಯವಿದೆ ಎಂದು QS ವರದಿ ಸೂಚಿಸಿದೆ.

ವಿಕಸಿತ್ ಭಾರತ್ 2047 ಕನಸಿಗೆ ವಿಶ್ವವಿದ್ಯಾಲಯಗಳೇ ಆಧಾರ : QS ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಸ್ಸಿಕಾ ಟರ್ನರ್ ಅವರ ಪ್ರಕಾರ, ಭಾರತದ ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ; ಅವು ದೇಶದ ಆರ್ಥಿಕ ಬೆಳವಣಿಗೆ, ತಾಂತ್ರಿಕ ನಾಯಕತ್ವ ಮತ್ತು ಸಾಮಾಜಿಕ ಪ್ರಗತಿಗೆ ಬುನಾದಿಯಾಗಿವೆ. ಸಂಶೋಧನೆ, ನಾವೀನ್ಯತೆ ಮತ್ತು ಪ್ರತಿಭಾ ಅಭಿವೃದ್ಧಿಯಲ್ಲಿ ಭಾರತ ಮಾಡುತ್ತಿರುವ ಹೂಡಿಕೆಗಳು ಈಗ ಜಾಗತಿಕ ಶ್ರೇಯಾಂಕಗಳಲ್ಲಿಯೂ ಸ್ಪಷ್ಟವಾಗಿ ಪ್ರತಿಫಲಿಸುತ್ತಿವೆ ಎಂದು ಅವರು ಹೇಳಿದ್ದಾರೆ.