ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೀಕರ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಸಮೀಪದ ಚಾಯೆನ್ ಗ್ರಾಮದ ಬಳಿ ಶುಕ್ರವಾರ ಮಧ್ಯಾಹ್ನ ಪತನಗೊಂಡಿದೆ.
ಅಪಘಾತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಹಾಗೂ ಬೆಂಗಳೂರು ಮೂಲದ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕ್ಯಾಪ್ಟನ್ ಹಿಮಾಂಶು, ಪ್ರತಾಪ್, ಅರುಣ್, ಶಂಕರ್ ಗೌಡ, ಕೆ. ಸುಧೀರ್ ಮತ್ತು ನಾಗರಾಜು ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಟ್ರಾನ್ಸ್ ಭಾರತ್ ಕಂಪನಿಗೆ ಸೇರಿದ VT-HCX ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ಬದರಿನಾಥದಿಂದ ಪ್ರಯಾಣ ಆರಂಭಿಸಿತ್ತು. ಮಧ್ಯಾಹ್ನ ಸುಮಾರು 2.20ರ ವೇಳೆಗೆ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದ ಚಾಯೆನ್ ಗ್ರಾಮದ ಸಮೀಪ ಸಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ವರದಿಯಾಗಿದೆ.
ಘಟನೆ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಜೋಶಿಮಠದ ಚಾಯೆನ್ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರುವ ದುಃಖದ ಸುದ್ದಿ ಬಂದಿದೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ, ಎಸ್‌ಡಿಆರ್‌ಎಫ್ ಮತ್ತು ಐಟಿಬಿಪಿ ಪಡೆಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನಾನೇ ವಹಿಸಿಕೊಂಡಿದ್ದೇನೆ’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದುರಂತದ ಬೆನ್ನಲ್ಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.






















