SK Home Ad
Home ಸುದ್ದಿ ದೇಶ E20 ಹೆಸರಿನಲ್ಲಿ ಶೇ. 31ರಷ್ಟು ಎಥೆನಾಲ್ ಕಲಬೆರಕೆ?: ಪೆಟ್ರೋಲ್ ಟೆಸ್ಟ್ ಬೆನ್ನಲ್ಲೇ ತೈಲ ಕಂಪನಿಗಳ ವಿರುದ್ಧ...

E20 ಹೆಸರಿನಲ್ಲಿ ಶೇ. 31ರಷ್ಟು ಎಥೆನಾಲ್ ಕಲಬೆರಕೆ?: ಪೆಟ್ರೋಲ್ ಟೆಸ್ಟ್ ಬೆನ್ನಲ್ಲೇ ತೈಲ ಕಂಪನಿಗಳ ವಿರುದ್ಧ ಸಚಿವ ರಿಜ್ವಾನ್ ಅರ್ಷದ್ ಗರಂ!

0
9

ಕರ್ನಾಟಕದಲ್ಲಿ ‘E20’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಶೇಕಡಾ 20ಕ್ಕಿಂತಲೂ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡುತ್ತಿರುವ ಆಘಾತಕಾರಿ ಅಂಶ ಪರೀಕ್ಷೆಗಳಿಂದ ಬಯಲಾಗಿದೆ.

ರಾಜ್ಯದ ಹಲವೆಡೆ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳಲ್ಲಿ ಗರಿಷ್ಠ ಶೇ. 31.2ರಷ್ಟು ಎಥೆನಾಲ್ ಪತ್ತೆಯಾಗಿದ್ದು, ಗ್ರಾಹಕರ ವಾಹನಗಳ ಎಂಜಿನ್ ಹಾಳಾಗುವುದಕ್ಕೆ ಕಾರಣವಾಗಿರುವ ತೈಲ ಕಂಪನಿಗಳಿಗೆ ದಂಡ ವಿಧಿಸಬೇಕು ಮತ್ತು ವಾಹನ ಸವಾರರಿಗೆ ಪರಿಹಾರ ನಿಧಿ ಸ್ಥಾಪಿಸಬೇಕು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎನ್‌ಎಬಿಎಲ್ (NABL) ಮಾನ್ಯತೆ ಪಡೆದ ಹಾಗೂ ಐಎಸ್‌ಒ ಪ್ರಮಾಣಿತ ಪ್ರಯೋಗಾಲಯದ ವರದಿಯನ್ನು ಬಿಡುಗಡೆ ಮಾಡಿದ ಸಚಿವರು, ರಾಜ್ಯದ 7 ಜಿಲ್ಲೆಗಳಿಂದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಲಾಗಿತ್ತು ಎಂದಿದ್ದಾರೆ.

ಪರೀಕ್ಷೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಪೆಟ್ರೋಲ್‌ನಲ್ಲಿ ಶೇ. 31.2 ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂನಲ್ಲಿ (HPCL) ಶೇ. 30.5 ರಷ್ಟು ಎಥೆನಾಲ್ ಪತ್ತೆಯಾಗಿದೆ. ಬಿಪಿಸಿಎಲ್ (BPCL) ಶೇ. 26.5, ನಯಾರಾ ಶೇ. 26.1 ಹಾಗೂ ಶೆಲ್ ಸಂಸ್ಥೆಯ ಇಂಧನದಲ್ಲಿ ಶೇ. 25.5 ರಷ್ಟು ಎಥೆನಾಲ್ ಕಂಡುಬಂದಿದೆ.

ಆರಂಭದಲ್ಲಿ ತೈಲ ಕಂಪನಿಗಳ ಸ್ವಂತ ಲ್ಯಾಬ್‌ಗಳಿಗೆ ಕಳುಹಿಸಿದಾಗ ಎಥೆನಾಲ್ ಪ್ರಮಾಣದ ಮಾಹಿತಿಯನ್ನೇ ಮುಚ್ಚಿಡಲಾಗಿತ್ತು ಎಂದು ಸಚಿವರು ಪಾರದರ್ಶಕತೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿರುವ 35 ಕೋಟಿಗೂ ಅಧಿಕ ವಾಹನಗಳಲ್ಲಿ ಶೇ. 99ರಷ್ಟು ವಾಹನಗಳು ಶೇ. 20ಕ್ಕಿಂತ ಹೆಚ್ಚಿನ ಎಥೆನಾಲ್ ಇಂಧನವನ್ನು ತಡೆದುಕೊಳ್ಳುವಂತೆ ತಯಾರಾಗಿಲ್ಲ. ಇದರಿಂದ ಮೈಲೇಜ್ ಕುಸಿತ ಮತ್ತು ಎಂಜಿನ್ ಬಿಡಿಭಾಗಗಳು ಹಾಳಾಗುವ ಮೂಲಕ ಗ್ರಾಹಕರಿಗೆ ವಾರ್ಷಿಕ ಸುಮಾರು ರೂ. 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ತಕ್ಷಣವೇ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು, ನಿಯಮ ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ವಾಹನ ಮಾಲೀಕರಿಗೆ ‘E20 ಪರಿಹಾರ ನಿಧಿ’ ಸ್ಥಾಪಿಸಿ ಪರಿಹಾರ ನೀಡಬೇಕು ಎಂದು ಸಚಿವರು ನಾಲ್ಕು ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದಿಟ್ಟಿದ್ದಾರೆ.