Home Advertisement
Home ನಮ್ಮ ಜಿಲ್ಲೆ ತುಮಕೂರು ಮಾದಾವರ-ತುಮಕೂರು ಮೆಟ್ರೋ ಯೋಜನೆಗೆ ಡಿಪಿಆರ್ ಸಲ್ಲಿಕೆ

ಮಾದಾವರ-ತುಮಕೂರು ಮೆಟ್ರೋ ಯೋಜನೆಗೆ ಡಿಪಿಆರ್ ಸಲ್ಲಿಕೆ

0
72

ಬೆಂಗಳೂರು-ತುಮಕೂರು ಸಂಪರ್ಕಕ್ಕೆ ಹೊಸ ಮೆಟ್ರೋ ಮಾರ್ಗ ಪ್ರಸ್ತಾವನೆ: ₹20 ಸಾವಿರ ಕೋಟಿ ವೆಚ್ಚದ ಮೆಟ್ರೋ ಯೋಜನೆಗೆ ಸರ್ಕಾರದ ಚಿಂತನೆ

ಬೆಂಗಳೂರು: ಬಹುಕಾಲದಿಂದ ನಿರೀಕ್ಷೆಯಾಗಿದ್ದ ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಗೆ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಯೋಜನೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (DPR) ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವರು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಬಿಎಂಆರ್‌ಸಿಎಲ್‌ನಿಂದ ಡಿಪಿಆರ್ ಸಿದ್ಧ: ಸಚಿವರ ಪ್ರಕಾರ, Bangalore Metro Rail Corporation Limited (BMRCL) ಯೋಜನೆಯ ಡಿಪಿಆರ್ ಸಿದ್ಧಪಡಿಸಿದ್ದು, ಮೆಟ್ರೋ ಇಲಾಖೆ ಮತ್ತೊಂದು ತಾಂತ್ರಿಕ ಸಂಸ್ಥೆಯ ಮೂಲಕ ವರದಿ ತಯಾರಿಸಿದೆ. ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಫೀಸಿಬಿಲಿಟಿ ಅಧ್ಯಯನಕ್ಕೆ ₹3.5 ಕೋಟಿ ವೆಚ್ಚ: “ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಫೀಸಿಬಿಲಿಟಿ ಅಧ್ಯಯನ ನಡೆಸುವುದಾಗಿ ಘೋಷಿಸಿದ್ದರು. ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ಸುಮಾರು ₹3.5 ಕೋಟಿ ವೆಚ್ಚದಲ್ಲಿ ಅಧ್ಯಯನ ವರದಿ ಪಡೆಯಲಾಗಿದೆ. ಆ ವರದಿಯಲ್ಲಿ ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ ಯೋಜನೆ ಸಾಧ್ಯ ಎಂದು ತಿಳಿಸಲಾಗಿದೆ” ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ರಾಜ್ಯದ ಹಸಿರು ಸಂರಕ್ಷಣೆಗೆ ಹೊಸ ಸಂಕಲ್ಪ ಘೋಷಿಸಿದ ಸರ್ಕಾರ

₹20 ಸಾವಿರ ಕೋಟಿ ಅಂದಾಜು ವೆಚ್ಚ : ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP Model) ಆಧಾರದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಡಿಪಿಆರ್‌ನಲ್ಲಿ ಯೋಜನೆಗೆ ಸುಮಾರು ₹20 ಸಾವಿರ ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸಂಪುಟ ಸಭೆಯಲ್ಲಿ ಅಂತಿಮ ಚರ್ಚೆ : ಈ ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸಲಾಗುವುದು. ಬಳಿಕ ಸರ್ಕಾರದ ಅನುಮೋದನೆ ದೊರೆತ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ತುಮಕೂರಿಗೆ ಮಹತ್ವದ ಸಂಪರ್ಕ : ಮಾದಾವರ-ತುಮಕೂರು ಮೆಟ್ರೋ ಯೋಜನೆ ಜಾರಿಗೆ ಬಂದರೆ ಬೆಂಗಳೂರು ಮತ್ತು ತುಮಕೂರಿನ ನಡುವಿನ ಸಂಚಾರ ಸುಗಮಗೊಳ್ಳುವ ನಿರೀಕ್ಷೆ ಇದೆ. ಕೈಗಾರಿಕೆ, ಶಿಕ್ಷಣ, ಉದ್ಯೋಗ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಇದು ದೊಡ್ಡ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಯೋಜನೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಸಂಪರ್ಕ ವೃದ್ಧಿಗೂ ನೆರವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.