SK Home Ad
Home ಸುದ್ದಿ ಇಬ್ಬರು ಹೆಂಡಿರ ಮುದ್ದಿನ ಶಾಸಕರು: ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಯಿಂದ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲ

ಇಬ್ಬರು ಹೆಂಡಿರ ಮುದ್ದಿನ ಶಾಸಕರು: ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಯಿಂದ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲ

0
10

ಬೆಂಗಳೂರು: ವಿಧಾನ ಸಭೆಯಲ್ಲಿ ಸಿಎಂ ನೀಡಿರುವ ಹೇಳಿಕೆಯೊಂದು ಈಗ ಎಲ್ಲರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದು, ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, “ಬೆಂಗಳೂರಿಗೆ ಬಂದ ಶಾಸಕರು ಯಾರೂ ವಾಪಸ್ ಹೋಗುತ್ತಿಲ್ಲ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಶಾಸಕರು ಎರಡೆರಡು ಮದುವೆಯಾಗಿದ್ದಾರೆ. ಇಂತಹ ಶಾಸಕರ ಪಟ್ಟಿ ನನ್ನ ಬಳಿಯಿದೆ” ಎಂದು ನೀಡಿರುವ ಹೇಳಿಕೆ ಈಗ ಹೊಸ ಸಂಚಲನ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ಈ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕರ ಮದುವೆ ವಿಷಯವನ್ನು ಸದನದ ವೇದಿಕೆಯಲ್ಲಿ ಪ್ರಸ್ತಾಪಿಸುವುದು ಜನಪ್ರತಿನಿಧಿಗಳ ಹಾಗೂ ವಿಧಾನಸಭೆಯ ಘನತೆಗೆ ಶೋಭೆ ತರುವುದಿಲ್ಲ. ಇಂತಹ ಹಗುರ ಹೇಳಿಕೆಗಳು ಶಾಸಕರ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯ ಹಾಗೂ ಅಪಹಾಸ್ಯ ಹುಟ್ಟುಹಾಕುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ.. ಶಾಸಕ ಸುರೇಶ್ ಕುಮಾರ್, “ಮುಖ್ಯಮಂತ್ರಿಗಳು ಈಗಾಗಲೇ ಹೇಳಬಾರದ್ದನ್ನು ಹೇಳಿದ್ದಾರೆ. ಈಗ ರಾಜ್ಯದ ಜನರಲ್ಲಿ ಕುತೂಹಲ ಮೂಡಿದೆ. ಆದ್ದರಿಂದ, ಎರಡೆರಡು ಮದುವೆಯಾಗಿರುವ ಆ ಶಾಸಕರು ಯಾರೆಂಬ ಪಟ್ಟಿಯನ್ನು ತಕ್ಷಣ ಬಹಿರಂಗಪಡಿಸಬೇಕು. ಇಲ್ಲವಾದರೆ ಜನತೆ ಎಲ್ಲಾ ಶಾಸಕರನ್ನೂ ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂದು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ.. ‘ಇಬ್ಬರು ಹೆಂಡಿರ ಮುದ್ದಿನ ಶಾಸಕರು’ ಯಾರೆಂಬ ಪ್ರಶ್ನೆ ಈಗ ರಾಜ್ಯದ ರಾಜಕೀಯ ಅಂಗಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.