ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ತಮ್ಮ 64ನೇ ಹುಟ್ಟುಹಬ್ಬವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಒಂದು ಕಡೆ ಅಭಿಮಾನಿಗಳು ಹಾಗೂ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ವಿಶೇಷ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಬಿಡುಗಡೆ ಮಾಡಿ ಮಾನವೀಯತೆ ಮೆರೆದಿದ್ದರೆ, ಮತ್ತೊಂದೆಡೆ ಅವರ ಬಹುನಿರೀಕ್ಷಿತ ಸಿನಿಮಾಗಳ ಟೀಸರ್, ಪೋಸ್ಟರ್ ಹಾಗೂ ಪ್ರೋಮೋಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.
ಈ ಬಾರಿಯ ಹುಟ್ಟುಹಬ್ಬ ಶಿವಣ್ಣ ಅವರ ಸಿನಿ ಬದುಕಿನ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದ್ದು, ಸಾಲು ಸಾಲು ಚಿತ್ರಗಳ ಅಪ್‌ಡೇಟ್‌ಗಳು ಅಭಿಮಾನಿಗಳಲ್ಲಿ ಹೊಸ ಸಂಭ್ರಮ ಮೂಡಿಸಿವೆ.
‘ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ : ಕಳೆದ ವರ್ಷ ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಗಳಿಸಿದ್ದ ಶಿವರಾಜ್‌ಕುಮಾರ್ ಅವರ ಜೀವನದ ಅತ್ಯಂತ ಭಾವನಾತ್ಮಕ ಅಧ್ಯಾಯವನ್ನು ತೆರೆದಿಡುವ ‘ಸರ್ವೈವರ್’ (Survivor) ಸಾಕ್ಷ್ಯಚಿತ್ರದ ಅಧಿಕೃತ ಟೀಸರ್ ಬಿಡುಗಡೆಗೊಂಡಿದೆ.
ಗೀತಾ ಶಿವರಾಜ್‌ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರದಲ್ಲಿ ಶಿವಣ್ಣ ಚಿಕಿತ್ಸೆಗೆ ಒಳಗಾಗಿದ್ದ ಆಸ್ಪತ್ರೆಯೊಳಗಿನ ನೈಜ ದೃಶ್ಯಗಳನ್ನು ಸೇರಿಸಲಾಗಿದೆ.
ಈ ಟೀಸರ್‌ನಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರಾದ: ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್, ಸಾಯಿ ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಅವರು ಶಿವಣ್ಣ ಅವರ ಹೋರಾಟ, ವ್ಯಕ್ತಿತ್ವ ಹಾಗೂ ಮಾನವೀಯತೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಾಕ್ಷ್ಯಚಿತ್ರ ಶೀಘ್ರದಲ್ಲೇ ವೀಕ್ಷಣೆಗೆ ಲಭ್ಯವಾಗಲಿದೆ.
ಗಾಂಧಿ ಜಯಂತಿಗೆ ‘ಬೇಲ್’ ಸಿನಿಮಾ ರಿಲೀಸ್ : ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಬೇಲ್’ ಚಿತ್ರದ ಹೊಸ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಹೊಸ ಪೋಸ್ಟರ್‌ನಲ್ಲಿ ಶಿವಣ್ಣ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಅಕ್ಟೋಬರ್ 2, ಗಾಂಧಿ ಜಯಂತಿಯಂದು ಈ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ: ದೀಕ್ಷಿತ್ ಶೆಟ್ಟಿ. ಸಾಯಿ ಕುಮಾರ್, ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಎ ಫಾರ್ ಆನಂದ್’ ಪ್ರೋಮೋ ಔಟ್ : ‘ಘೋಸ್ಟ್’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಶ್ರೀನಿ ಹಾಗೂ ಶಿವರಾಜ್‌ಕುಮಾರ್ ಮತ್ತೊಮ್ಮೆ ಒಂದಾಗಿರುವ ಸಿನಿಮಾ ‘ಎ ಫಾರ್ ಆನಂದ್’. ಚಿತ್ರದ ಪ್ರೋಮೋ ಬಿಡುಗಡೆಗೊಂಡಿದ್ದು, ಇದರಲ್ಲಿ ಶಿವಣ್ಣ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಿಡುಗಡೆಯಾದ ಪ್ರೋಮೋದಲ್ಲಿ ಗೀತಾ ಶಿವರಾಜ್‌ಕುಮಾರ್, ದುನಿಯಾ ವಿಜಯ್, ನಿರ್ದೇಶಕ ಶ್ರೀನಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸ್ಪೆಷಲ್ ವಿಡಿಯೋ : ನಿರ್ದೇಶಕ ಹೇಮಂತ್ ಎಂ. ರಾವ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆಕ್ಷನ್-ಸ್ಪೈ ಥ್ರಿಲ್ಲರ್ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡವೂ ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಶಿವಣ್ಣ ಅವರ ವಿಭಿನ್ನ ಗೆಟಪ್, ಮೇಕಿಂಗ್ ಝಲಕ್ ಹಾಗೂ ಆಕ್ಷನ್ ಅವತಾರವನ್ನು ಅನಾವರಣಗೊಳಿಸಲಾಗಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಿಗೆ ನಟಿಸುತ್ತಿದ್ದು, ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಅಭಿಮಾನಿಗಳಿಗೆ ಡಬಲ್ ಸಂಭ್ರಮ: ಒಂದೆಡೆ ಆರೋಗ್ಯ ಸೇವೆಯ ಮೂಲಕ ಜನರಿಗೆ ನೆರವಾಗುವ ಹೆಲ್ತ್ ಕಾರ್ಡ್ ಯೋಜನೆ, ಮತ್ತೊಂದೆಡೆ ಸಾಲು ಸಾಲು ಸಿನಿಮಾಗಳ ಅಪ್‌ಡೇಟ್‌ಗಳು – ಈ ಎರಡೂ ಸೇರಿ ಶಿವರಾಜ್‌ಕುಮಾರ್ ಅವರ 64ನೇ ಹುಟ್ಟುಹಬ್ಬವನ್ನು ಅಭಿಮಾನಿಗಳಿಗೆ ಮರೆಯಲಾಗದ ಹಬ್ಬವನ್ನಾಗಿಸಿದೆ.






















