SK Home Ad
Home ಸಿನಿ ಮಿಲ್ಸ್ ಕನ್ನಡಿಯ ಮೇಲೆ ‘ಪ್ರಶಾಂತ್ ಹಾಂಟೆಡ್’ ಬರೆದ ಗುಳ್ಳೆನರಿ ಯಶಸ್, ಯಾರ ಮೇಲೆ ಮನೆಯವರ ಅನುಮಾನ?

ಕನ್ನಡಿಯ ಮೇಲೆ ‘ಪ್ರಶಾಂತ್ ಹಾಂಟೆಡ್’ ಬರೆದ ಗುಳ್ಳೆನರಿ ಯಶಸ್, ಯಾರ ಮೇಲೆ ಮನೆಯವರ ಅನುಮಾನ?

0
44

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗಿದ್ದು, ಕಾಡಿನ ಸ್ವರೂಪ ಪಡೆದುಕೊಂಡಿರುವ ಮನೆಯೊಳಗೆ ನಡೆಯುತ್ತಿರುವ ‘ಗುಳ್ಳೆನರಿ’ ಟಾಸ್ಕ್ ಸ್ಪರ್ಧಿಗಳ ನಡುವೆ ಅನುಮಾನದ ಕಿಡಿ ಹೊತ್ತಿಸಿದೆ. ಗುಳ್ಳೆನರಿಯಾಗಿ ಗುಪ್ತ ಪಾತ್ರ ನಿಭಾಯಿಸುತ್ತಿರುವ ಯಶಸ್ ತಮ್ಮ ಚಾಣಾಕ್ಷ ಆಟದ ಮೂಲಕ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಈ ಹಿಂದಿನ ಟಾಸ್ಕ್‌ನಲ್ಲಿ ಗಾನವಿ ಕ್ಯಾಪ್ಟನ್ಸಿ ತಂಡವನ್ನು ಸೇರಿಕೊಂಡು ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದ ಯಶಸ್, ಇದೀಗ ಬಿಗ್ ಬಾಸ್ ನೀಡಿದ ಮತ್ತೊಂದು ಹೊಸ ಸವಾಲನ್ನು ಯಾರಿಗೂ ಸುಳಿವು ಸಿಗದಂತೆ ಪೂರ್ಣಗೊಳಿಸಿದ್ದಾರೆ.

ಬಿಗ್ ಬಾಸ್ ಕಳುಹಿಸಿದ ವಿಶೇಷ ಪತ್ರದ ಪ್ರಕಾರ, ಗುಳ್ಳೆನರಿಯಾದವರು ಮನೆಯ ಒಬ್ಬ ಸದಸ್ಯರನ್ನು ಆಯ್ಕೆ ಮಾಡಿ, ಅವರ ಹೆಸರಿನ ಜೊತೆಗೆ ‘ಹಾಂಟೆಡ್’ (Haunted) ಎಂದು ಮನೆಯ ಯಾವುದಾದರೂ ಕನ್ನಡಿಯ ಮೇಲೆ ಬರೆಯಬೇಕಿತ್ತು. ಅದರಂತೆ ಸ್ಪರ್ಧಿ ಪ್ರಶಾಂತ್ ಅವರನ್ನು ಆಯ್ಕೆ ಮಾಡಿಕೊಂಡ ಯಶಸ್, ಬಾತ್‌ರೂಮ್‌ನ ಕನ್ನಡಿಯ ಮೇಲೆ ‘ಪ್ರಶಾಂತ್ ಹಾಂಟೆಡ್’ ಎಂದು ಬರೆದಿದ್ದಾರೆ. ಇದನ್ನು ಕಂಡ ಮನೆಯ ಸದಸ್ಯರು ಈ ಕೆಲಸ ಮಾಡಿದವರು ಯಾರು ಎಂದು ಹುಡುಕಾಟ ಆರಂಭಿಸಿದ್ದು, ಯಶಸ್ ಮೇಲೆ ಅನುಮಾನ ಬಾರದಂತೆ ಇತರ ಸ್ಪರ್ಧಿಗಳತ್ತ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದೆಡೆ, ಯಶಸ್ ಮಾತ್ರ ತಾವು ಬರೆದಿದ್ದರೂ ತಮ್ಮ ಮೇಲಿನ ಅನುಮಾನ ದೂರವಿಟ್ಟು, ಮನೆಯವರ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಜಾಣ್ಮೆ ತೋರಿದ್ದಾರೆ. ಕಿರೀಟ ಮತ್ತು ಡೈಮಂಡ್ ಕದಿಯುವ ಟಾಸ್ಕ್‌ಗಳ ಮಾದರಿಯಲ್ಲೇ ಸಾಗಿರುವ ಈ ಗುಳ್ಳೆನರಿ ಆಟವು ವೀಕ್ಷಕರಲ್ಲೂ ತೀವ್ರ ಕುತೂಹಲ ಮೂಡಿಸಿದೆ. ಎಲ್ಲರ ಕಣ್ಣೆದುರೇ ಆಟವಾಡುತ್ತಾ ಮನೆಯವರನ್ನು ಗೊಂದಲಕ್ಕೆ ಸಿಲುಕಿಸುತ್ತಿರುವ ಯಶಸ್ ಅವರ ತಂತ್ರಗಾರಿಕೆ ಮುಂದಿನ ದಿನಗಳಲ್ಲಿ ಮನೆಯೊಳಗೆ ಇನ್ನಷ್ಟು ತಿರುವುಗಳಿಗೆ ಕಾರಣವಾಗಲಿದೆ.