SK Home Ad
Home ಸಿನಿ ಮಿಲ್ಸ್ ‘ಗುಳ್ಳೆನರಿ’ ತಂತ್ರದಿಂದ ಗಗನ್-ಗಾನವಿ ಬಿರುಕು, ಕಣ್ಣೀರಿಟ್ಟ ಆಸಿಯಾ ದೊಡ್ಮನೆ ಬಿಡುವ ಮಾತು!

‘ಗುಳ್ಳೆನರಿ’ ತಂತ್ರದಿಂದ ಗಗನ್-ಗಾನವಿ ಬಿರುಕು, ಕಣ್ಣೀರಿಟ್ಟ ಆಸಿಯಾ ದೊಡ್ಮನೆ ಬಿಡುವ ಮಾತು!

0
5

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ನಡೆಯುತ್ತಿರುವ ‘ಗುಳ್ಳೆನರಿ’ ಟಾಸ್ಕ್ ಸ್ಪರ್ಧಿಗಳ ನಡುವೆ ಅನುಮಾನದ ಬಿರುಗಾಳಿ ಎಬ್ಬಿಸಿದೆ. ತಂಡದೊಳಗೆ ಇದ್ದುಕೊಂಡೇ ಆಟ ಕೆಡಿಸುವ ಗುಪ್ತ ಜವಾಬ್ದಾರಿ ಹೊತ್ತಿರುವ ಅಸಲಿ ಗುಳ್ಳೆನರಿ ಯಶಸ್ ಕೃಷ್ಣ ತಮ್ಮ ನಿಜವಾದ ಮುಖವಾಡ ಮರೆಮಾಚಿ, ಇತರರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯ ಸದಸ್ಯರು ಪರಸ್ಪರ ಅನುಮಾನಿಸಿಕೊಳ್ಳುತ್ತಿದ್ದರೆ, ಯಶಸ್ ಮಾತ್ರ ಚಾಣಾಕ್ಷತನದಿಂದ ಇತರರ ಮೇಲೆ ಗಮನ ತಿರುಗಿಸುತ್ತಾ ಮುಂದುವರಿದಿದ್ದಾರೆ.

ಈ ಗೊಂದಲದ ನಡುವೆ ಗಗನ್ ಚಿನ್ನಪ್ಪ ಅವರಿಗೆ ಗಾನವಿ ಮೇಲೆ ಗುಳ್ಳೆನರಿಯ ಶಂಕೆ ಮೂಡಿದೆ. ಮೊದಲಿನಿಂದಲೂ ಕಿರಿಕ್ ಮಾಡಿಕೊಳ್ಳುತ್ತಿದ್ದ ಗಗನ್ ಮತ್ತು ಗಾನವಿ ನಡುವೆ, ಗಾನವಿ ಮಾತನಾಡುವ ಶೈಲಿ ಬದಲಾದ ಕಾರಣ ಅವರು ಗುಳ್ಳೆನರಿ ಇರಬಹುದು ಎಂದು ಗಗನ್ ಭಾವಿಸಿದ್ದಾರೆ. ವಾಸ್ತವದಲ್ಲಿ ಗಾನವಿ ಗುಳ್ಳೆನರಿ ಅಲ್ಲವಾದರೂ, ತಮ್ಮ ವಿಶೇಷ ಅಧಿಕಾರ ಬಳಸಿ ಗಗನ್ ಅವರ ಗುಟ್ಟನ್ನು ರಟ್ಟು ಮಾಡಿದ್ದು ಗಗನ್ ಅವರನ್ನು ಕೆರಳಿಸಿದೆ. “ಈಗ ನನ್ನ ಗೇಮ್ ಶುರು, ಇನ್ಮೇಲೆ ನಿನ್ನನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುತ್ತೇನೆ” ಎಂದು ಗಗನ್ ತಿರುಗೇಟು ನೀಡಿದ್ದು, ಸಿಕ್ಕ ಸಿಕ್ಕ ಕಡೆ ತನ್ನನ್ನು ಎಕ್ಸ್‌ಪೋಸ್ ಮಾಡುವುದೇ ಗಾನವಿ ಉದ್ದೇಶ ಎಂದು ತಾಂಡವ್ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

ಮತ್ತೊಂದೆಡೆ, ಯಶಸ್ ಪದೇ ಪದೇ ಆಸಿಯಾ ಅವರೇ ಗುಳ್ಳೆನರಿ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದು, ಟಾಸ್ಕ್‌ಗಳಲ್ಲಿ ಆಸಿಯಾ ಅವರನ್ನು ಸೋಲಿಸುವ ತಂತ್ರ ಅಡಗಿದೆ ಎಂಬ ಮಾತುಗಳು ಅವರನ್ನು ತೀವ್ರವಾಗಿ ಕುಗ್ಗಿಸಿವೆ. ನೊಂದುಕೊಂಡ ಆಸಿಯಾ, “ಬಿಗ್ ಬಾಸ್ ನನ್ನ ಕೈಯಲ್ಲಿ ಆಗುತ್ತಿಲ್ಲ, ನಾನು ಮನೆಗೆ ಹೋಗುತ್ತೇನೆ” ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದು, ಆಟವನ್ನು ಅರ್ಧಕ್ಕೆ ತೊರೆಯುವ ಮಾತನ್ನೂ ಆಡಿದ್ದಾರೆ. ಕಾಗೆ ಮತ್ತು ನರಿ ಕಾನ್ಸೆಪ್ಟ್‌ನ ಟಾಸ್ಕ್‌ಗಳು ನಡೆಯುತ್ತಿದ್ದರೂ ಹಲವು ಸ್ಪರ್ಧಿಗಳು ಗಂಭೀರವಾಗಿ ವಿಶ್ಲೇಷಿಸಿ ಆಡುವ ಬದಲು ಟೈಮ್‌ಪಾಸ್ ಮಾಡುತ್ತಿರುವಂತೆ ಕಾಣುತ್ತಿದೆ.