BBK13: ‘ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ’ ಮೂಲಕ ಮುಖ್ಯ ಶೋಗೆ ಆಯ್ಕೆಯಾಗಿದ್ದ ಮಾಡರ್ನ್ ಮಹಾಕವಿ ಮಂಜ ಮತ್ತು ಲಿಖಿತ್ ಗೊಂದಿ ಅವರ ಸ್ನೇಹ ಮನೆಯೊಳಗೆ ಮಾತ್ರವಲ್ಲದೆ ಹೊರಬಂದ ಮೇಲೂ ಗಟ್ಟಿಯಾಗಿ ಮುಂದುವರಿದಿದೆ. ಎರಡನೇ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಿ ಇದೀಗ ಆಚೆ ಬಂದಿರುವ ಮಂಜ ಅವರಿಗೆ ಗೆಳೆಯ ಲಿಖಿತ್ ಗೊಂದಿ ಹಾಗೂ ‘ಅಗ್ನಿಪರೀಕ್ಷೆ’ ಖ್ಯಾತಿಯ ಅನನ್ಯ ಕೇಕ್ ಕತ್ತರಿಸಿ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ಸ್ನೇಹ ಮತ್ತು ಮುಂದಿನ ಹೊಸ ಪ್ರಾಜೆಕ್ಟ್ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಂಜ ಅವರ ಕುರಿತು ಮಾತನಾಡಿದ ಲಿಖಿತ್ ಗೊಂದಿ, “ಮಂಜ ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾನೆಂದು ಯಾರೂ ನಿರೀಕ್ಷಿಸಿರಲಿಲ್ಲ. ಯಾವುದೇ ಪರಿಸ್ಥಿತಿ ಎದುರಾದರೂ ಎದೆಗುಂದದೆ ನಿಭಾಯಿಸುವುದೇ ಮಂಜನ ವಿಶೇಷತೆ. ಅವನು ಬದಲಾಗಿಲ್ಲ, ಅವನ ಜೊತೆಗೆ ಒಂದು ಸೆರಗು ಬಂದಿದೆ ಅಷ್ಟೇ” ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಂಜ, “ಯಾವುದೇ ಸನ್ನಿವೇಶದಲ್ಲೂ ಕೈಬಿಡದೆ, ಕೊನೆಯವರೆಗೂ ಗಟ್ಟಿಯಾಗಿ ನಿಲ್ಲುವ ‘ಲೆಜೆಂಡ್ ಆಫ್ ಫ್ರೆಂಡ್’ ಅಂದರೆ ಅದು ಲಿಖಿತ್ ಗೊಂದಿ” ಎಂದು ಗೆಳೆಯನ ಬಾಂಡಿಂಗ್ ಕೊಂಡಾಡಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ನಡೆ ಬಗ್ಗೆ ಬಿಗ್ ಅಪ್ಡೇಟ್ ನೀಡಿರುವ ಮಂಜ, ತಾವು ಮತ್ತು ಲಿಖಿತ್ ಗೊಂದಿ ಸೇರಿ ಸದ್ಯದಲ್ಲೇ ಹೊಸದೊಂದು ‘ಕ್ವಾಟ್ಲೆ ಶೋ’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದಾಗಿ ಸುಳಿವು ನೀಡಿದ್ದಾರೆ. ಬಿಗ್ ಬಾಸ್ ಮುಕ್ತಾಯದ ಬಳಿಕ ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಆರಂಭವಾಗುವ ನಿರೀಕ್ಷೆಯಿದ್ದು, ಈ ಜೋಡಿ ಅಲ್ಲಿ ಕಮಾಲ್ ಮಾಡಲಿದೆಯೇ ಎಂಬ ಕುತೂಹಲ ಮೂಡಿದೆ. ಮತ್ತೊಂದೆಡೆ, ಲಿಖಿತ್ ಗೊಂದಿ ಮತ್ತು ಅನನ್ಯ ಅವರು ಇತ್ತೀಚೆಗೆ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಆತ್ಮೀಯತೆ ಇದೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಜೋರಾಗಿದೆ.






















