SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಹೋಂವರ್ಕ್ ಮಾಡದ ತಪ್ಪಿಗೆ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರ ಕ್ರೌರ್ಯ

ಹೋಂವರ್ಕ್ ಮಾಡದ ತಪ್ಪಿಗೆ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರ ಕ್ರೌರ್ಯ

0
2

ಬಾಗಲಕೋಟೆ: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 2ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಮುಖ್ಯಶಿಕ್ಷಕ ಹಾಗೂ ಶಿಕ್ಷಕಿ ವಿರುದ್ಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಅನುದಾನರಹಿತ ರಾಣಿ ಚನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ.

ಅನಾರೋಗ್ಯದ ಕಾರಣ ಎರಡು ದಿನ ಶಾಲೆಗೆ ಗೈರಾಗಿದ್ದ ನಾವಲಗಿ ಗ್ರಾಮದ ಏಳು ವರ್ಷದ ಬಾಲಕ ಶ್ರೇಯಸ್ ವಿಜಯಕುಮಾರ ಆಸಂಗಿ ಬುಧವಾರ ಬೆಳಿಗ್ಗೆ ಶಾಲೆಗೆ ಹಾಜರಾಗಿದ್ದ. ಈ ವೇಳೆ ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮುಖ್ಯಶಿಕ್ಷಕ ಮನೇಶ ಅಂಬಿ ಹಾಗೂ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಬಾಲಕನಿಗೆ ಮನಬಂದಂತೆ ಥಳಿಸಿದ್ದಾರೆ.

ಬೆನ್ನು, ಕೈ-ಕಾಲು ಹಾಗೂ ತೊಡೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಬಾಸುಂಡೆ ಬರುವಂತೆ ಕಟ್ಟಿಗೆಯಿಂದ ಹೊಡೆದಿದ್ದಾರೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸಪ್ಪ ಸಾವಳಗಿ ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಬಳಿಕ ಬಾಲಕನನ್ನು ಎರಡು ಗಂಟೆಗಳ ಕಾಲ ನಿಲ್ಲಿಸಿ, ಊಟಕ್ಕೂ ಬಿಡದೆ ಆರೈಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಯು ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸಪ್ಪ ಸಾವಳಗಿ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು.