ಮುಂಬೈ: ಗಜಿನಿ, ಲಗಾನ್, ಸರ್ಫರೋಶ್ ಸೇರಿದಂತೆ ಹಲವು ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ತಮ್ಮ ವಿಭಿನ್ನ ಖಳನಾಯಕ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಮಂಗಳವಾರ ನಿಧನರಾದರು.
ಕಳೆದ ಕೆಲ ವರ್ಷಗಳಿಂದ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಮುಂಬೈ ಸಮೀಪದ ಭಿವಂಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆ ಬುಧವಾರ ನಡೆಯುವ ಸಾಧ್ಯತೆ ಇದೆ.
2005ರ ತಮಿಳು ಗಜಿನಿ ಚಿತ್ರದಲ್ಲಿ ಭಯಾನಕ ಖಳನಾಯಕನಾಗಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ನಂತರ ಅದೇ ಪಾತ್ರವನ್ನು ಹಿಂದಿಯ ಗಜಿನಿ ಚಿತ್ರದಲ್ಲೂ ನಿರ್ವಹಿಸಿ ದೇಶಾದ್ಯಂತ ಖ್ಯಾತಿ ಪಡೆದರು. ಲಗಾನ್, ಸರ್ಫರೋಶ್, ಸಯೆ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಪ್ರದೀಪ್ ರಾವತ್ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಭೋಜ್‌ಪುರಿ ಚಿತ್ರರಂಗಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹನಟರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.






















