SK Home Ad
Home ಸುದ್ದಿ ದೇಶ “ಟಾಯ್ಲೆಟ್‌ನಲ್ಲಿದ್ದಾರೆ, ಸ್ವಲ್ಪ ಸಮಯ ಕೊಡಿ”: ಉದಯನಿಧಿ ಬಂಧನದ ವೇಳೆ ಹೈಡ್ರಾಮಾ

“ಟಾಯ್ಲೆಟ್‌ನಲ್ಲಿದ್ದಾರೆ, ಸ್ವಲ್ಪ ಸಮಯ ಕೊಡಿ”: ಉದಯನಿಧಿ ಬಂಧನದ ವೇಳೆ ಹೈಡ್ರಾಮಾ

0
74

ಚೆನ್ನೈ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಬಂಧನದ ವೇಳೆ ಹೈಡ್ರಾಮಾವೊಂದು ನಡೆದಿದ್ದು, ಈ ಕುರಿತಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ ಪೊಲೀಸರು ಉದಯನಿಧಿ ಸ್ಟಾಲಿನ್ ಬಂಧಿಸಲು ಅವರ ಮನೆಗೆ ತೆರಳಿದ್ದ ವೇಳೆ ಈ ಡ್ರಾಮಾ ನಡೆದಿದೆ.

ಪೊಲೀಸರು ಉದಯನಿಧಿ ಅವರ ಚೆನ್ನೈ ನಿವಾಸಕ್ಕೆ ಬಂದಾಗ ಅವರು ಶೌಚಾಲಯದಲ್ಲಿದ್ದ ಕಾರಣ ಸ್ವಲ್ಪ ಸಮಯ ಕಾಯುವಂತೆ ಅವರ ಪತ್ನಿ ಕಿರುತಿಗಾ ಉದಯನಿಧಿ ಪೊಲೀಸರಿಗೆ ಮನವಿ ಮಾಡಿದ ದೃಶ್ಯ ವೈರಲ್ ಆಗಿದೆ.

“ಅವರು ಟಾಯ್ಲೆಟ್‌ನಲ್ಲಿದ್ದಾರೆ, ಸ್ವಲ್ಪ ಸಮಯ ಕೊಡಿ” ಎಂದು ಕಿರುತಿಗಾ ಪೊಲೀಸರೊಂದಿಗೆ ಮಾತನಾಡುತ್ತಿರುವುದು ವಿಡಿಯೋದಲ್ಲಿದೆ. ಬಳಿಕ ಪೊಲೀಸರು ಬಹಳ ಹೊತ್ತಿನಿಂದ ಕಾಯುತ್ತಿರುವುದಾಗಿ ಹೇಳುತ್ತಾ, “ನಾವು ಯಾವುದೇ ಕಾನೂನುಬಾಹಿರ ಕೆಲಸ ಮಾಡುತ್ತಿಲ್ಲ. ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಿರುತಿಗಾ, ಉದಯನಿಧಿ ಇನ್ನೂ ಬೆಳಗಿನ ಸಿದ್ಧತೆಯಲ್ಲಿ ಇದ್ದಾರೆ ಎಂದು ತಿಳಿಸಿ, ಸ್ವಲ್ಪ ಸಮಯ ಕಾಯುವಂತೆ ಮನವಿ ಮಾಡುತ್ತಾರೆ. ಈ ವೇಳೆ ಅಲ್ಲಿದ್ದ ಡಿಎಂಕೆ ಹಿರಿಯ ನಾಯಕ ಹಾಗೂ ಸಚಿವ ಎಂ. ಸುಬ್ರಮಣಿಯನ್ ಕೂಡ ಪೊಲೀಸರನ್ನು ಉದ್ದೇಶಿಸಿ, “ಇನ್ನೂ ಹತ್ತು ನಿಮಿಷ ಕಾಯಿರಿ. ಅವರು ಸ್ನಾನಗೃಹದಿಂದ ಹೊರಬರಲಿ. ವಕೀಲ ಸರವಣನ್ ಕೂಡ ಅಷ್ಟರೊಳಗೆ ಬರುತ್ತಾರೆ” ಎಂದು ಮನವಿ ಮಾಡುತ್ತಾರೆ.

ಅಲ್ಲದೆ, ಉದಯನಿಧಿಯನ್ನು ತಂಜಾವೂರಿಗೆ ಕರೆದೊಯ್ಯಬೇಕಿರುವುದರಿಂದ ಸುಮಾರು ಎಂಟು ಗಂಟೆಗಳ ಪ್ರಯಾಣವಿದೆ. ಆದ್ದರಿಂದ ಅವರ ಬೆಳಗಿನ ದಿನಚರಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸುಬ್ರಮಣಿಯನ್ ವಾದಿಸುತ್ತಾರೆ. ಆದರೆ, ಪೊಲೀಸರು “ನಾವು ಕಾನೂನು ಉಲ್ಲಂಘಿಸುತ್ತಿದ್ದೇವೆಯೇ? ನಮ್ಮ ಕರ್ತವ್ಯವನ್ನು ಮಾಡಲು ಅವಕಾಶ ನೀಡಿ” ಎಂದು ತಮ್ಮ ನಿಲುವನ್ನು ಪುನರುಚ್ಚರಿಸುತ್ತಾರೆ.

ಬಂಧನಕ್ಕೆ ಕಾರಣವೇನು?: ಆಗಸ್ಟ್‌ 3ರಂದು ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಂಜಾವೂರಿನಲ್ಲಿ ಡಿಎಂಕೆ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡಿದ್ದರು. ಈ ವೇಳೆ ಜನಸಮೂಹ ನಟಿ ತ್ರಿಷಾ ಹೆಸರನ್ನು ಘೋಷಣೆ ಕೂಗುತ್ತಿದ್ದಾಗ ಅವರು ದ್ವಂದ್ವಾರ್ಥ ಬರುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಬಳಿಕ ಹಲವು ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದರು.

ಬಳಿಕ ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಉದಯನಿಧಿ ಸ್ಟಾಲಿನ್ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.