ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಮತ್ತು ನಿವೇದಿತಾ ದಂಪತಿಯ ಕಿರಿಯ ಪುತ್ರಿ ಅಂಜನಾ ಅರ್ಜುನ್, ತಮ್ಮ ದೀರ್ಘಕಾಲದ ಗೆಳೆಯ ಹಾಗೂ ಉದ್ಯಮಿ Isaiah ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇಟಲಿಯ ಮನಮೋಹಕ ತಾಣದಲ್ಲಿ ನಡೆದ ಈ ಅಂತರ್ಧರ್ಮೀಯ ವಿವಾಹ ಮಹೋತ್ಸವವು ಜಾಗತಿಕ ಮತ್ತು ಸಾಂಪ್ರದಾಯಿಕ ವೈಭವದ ಸುಂದರ ಸಂಗಮಕ್ಕೆ ಸಾಕ್ಷಿಯಾಯಿತು.
ಅಂಜನಾ ಹಾಗೂ Isaiah ಹೈಸ್ಕೂಲ್ ದಿನಗಳಿಂದಲೂ, ಅಂದರೆ ಬರೋಬ್ಬರಿ 14 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡೂ ಕುಟುಂಬಸ್ಥರು ಮುಕ್ತ ಮನಸ್ಸಿನಿಂದ ಸಮ್ಮತಿ ಸೂಚಿಸಿದ್ದು, ಅರ್ಜುನ್ ಸರ್ಜಾ ದಂಪತಿ ಹಾಗೂ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಹತ್ತಿರವಿದ್ದು ಮದುವೆಯ ಧಾರ್ಮಿಕ ವಿಧಿವಿಧಾನಗಳನ್ನು ವೈಭವದಿಂದ ನೆರವೇರಿಸಿಕೊಟ್ಟಿದ್ದಾರೆ.
ಈ ವಿವಾಹ ಮಹೋತ್ಸವವು ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಂತೆ ಜರುಗಿತು. ವಿವಾಹಕ್ಕೂ ಮುನ್ನ ಆಯೋಜಿಸಲಾಗಿದ್ದ ಅರಿಶಿನ (ಹಳದಿ) ಹಾಗೂ ಮೆಹಂದಿ ಶಾಸ್ತ್ರದ ಚಟುವಟಿಕೆಗಳಲ್ಲಿ ಎರಡೂ ಕುಟುಂಬದವರು ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟು ಸಡಗರದಿಂದ ಪಾಲ್ಗೊಂಡಿದ್ದರು. ಅರ್ಜುನ್ ಸರ್ಜಾ ದಂಪತಿ ವರ Isaiah ಅವರಿಗೆ ಅರಿಶಿನ ಹಚ್ಚಿದರೆ, ವಧು ಅಂಜನಾಗೆ Isaiah ಕೂಡ ಅರಿಶಿನ ಹಚ್ಚಿ ಸಂಭ್ರಮಿಸಿದರು.
ಹಿಂದೂ ಸಂಪ್ರದಾಯದಂತೆ Isaiah, ಅಂಜನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದರು. ನಂತರ ಕ್ರಿಶ್ಚಿಯನ್ ಚರ್ಚ್ ವೆಡ್ಡಿಂಗ್ ಮಾದರಿಯಲ್ಲಿ ರೊಮ್ಯಾಂಟಿಕ್ ಶೈಲಿಯ ಮದುವೆ ಆಚರಣೆಯೂ ನೆರವೇರಿತು. ಸಹೋದರಿಯ ಮದುವೆ ಸಂಭ್ರಮದಲ್ಲಿ ಐಶ್ವರ್ಯಾ ಅರ್ಜುನ್ ಭಾಗಿಯಾಗಿ ತಂಗಿಗೆ ಶುಭಹಾರೈಸಿದರೆ, ಅರ್ಜುನ್ ಸರ್ಜಾ ಅವರು ಕುಟುಂಬದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಂಭ್ರಮಿಸಿದರು. ಪ್ರಸ್ತುತ ಈ ಮದುವೆಯ ಅಪರೂಪದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಹಾರೈಸುತ್ತಿದ್ದಾರೆ.






















