SK Home Ad
Home ಸುದ್ದಿ ದೇಶ ಅಂಚೆ ಇಲಾಖೆಗೆ ₹1,491 ಕೋಟಿ ಬಂಪರ್: ಕಚೇರಿಗಳಿಗೆ ಹೈಟೆಕ್ ಸ್ಪರ್ಶ!

ಅಂಚೆ ಇಲಾಖೆಗೆ ₹1,491 ಕೋಟಿ ಬಂಪರ್: ಕಚೇರಿಗಳಿಗೆ ಹೈಟೆಕ್ ಸ್ಪರ್ಶ!

0
30
2026-27ರಿಂದ 2030-31ರವರೆಗೆ ಐದು ವರ್ಷಗಳ ಯೋಜನೆ · ಅಂಚೆ ಮೂಲಸೌಕರ್ಯ ಆಧುನೀಕರಣಕ್ಕೆ ಒತ್ತು

ಅಂಚೆ ಇಲಾಖೆಗೆ ₹1,491 ಕೋಟಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ; 190 ಹೊಸ ಕಟ್ಟಡ, 2,550 ಅಂಚೆ ಕಚೇರಿಗಳ ನವೀಕರಣ

ನವದೆಹಲಿ: ದೇಶದ ಅಂಚೆ ಸೇವೆಗಳ ಮೂಲಸೌಕರ್ಯವನ್ನು ಆಧುನೀಕರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 25ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಅಂಚೆ ಇಲಾಖೆಯ ‘ಎಸ್ಟೇಟ್ ಮ್ಯಾನೇಜ್‌ಮೆಂಟ್ ಸ್ಕೀಮ್’ (Estates Management Scheme) ಯೋಜನೆಯನ್ನು ಮುಂದುವರಿಸಲು ಅನುಮೋದನೆ ನೀಡಲಾಗಿದೆ. 16ನೇ ಹಣಕಾಸು ಆಯೋಗದ ಅವಧಿಯಾದ 2026-27ರಿಂದ 2030-31ರವರೆಗೆ ಐದು ವರ್ಷಗಳಿಗಾಗಿ ಒಟ್ಟು ₹1,491 ಕೋಟಿ ಅನುದಾನ ಮೀಸಲಿಡಲಾಗಿದೆ.

ಈ ಯೋಜನೆಯಡಿ ಅಂಚೆ ಇಲಾಖೆಯ ಕಟ್ಟಡಗಳ ನಿರ್ಮಾಣ, ಶಿಥಿಲ ಕಟ್ಟಡಗಳ ಮರುನಿರ್ಮಾಣ, ಅಂಚೆ ಕಚೇರಿಗಳ ನವೀಕರಣ, ಏಕರೂಪದ ಬ್ರ್ಯಾಂಡಿಂಗ್, ಹಳೆಯ ಐತಿಹಾಸಿಕ ಅಂಚೆ ಕಟ್ಟಡಗಳ ಸಂರಕ್ಷಣೆ ಹಾಗೂ ಸಿಬ್ಬಂದಿಯ ವಸತಿ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುತ್ತದೆ. ದೇಶದ ಅಂಚೆ ಜಾಲವನ್ನು ಹೆಚ್ಚು ಪರಿಣಾಮಕಾರಿ, ಸುರಕ್ಷಿತ ಮತ್ತು ನಾಗರಿಕ ಸ್ನೇಹಿಯಾಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಬಾಡಿಗೆ ಕಟ್ಟಡಗಳ ಅವಲಂಬನೆ ಕಡಿಮೆ ಮಾಡಲು 190 ಹೊಸ ಅಂಚೆ ಕಟ್ಟಡ : ಯೋಜನೆಯಡಿ ₹280 ಕೋಟಿ ವೆಚ್ಚದಲ್ಲಿ ಇಲಾಖೆಯ ಖಾಲಿ ಜಾಗಗಳಲ್ಲಿ 190 ಹೊಸ ಅಂಚೆ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅಂಚೆ ಕಚೇರಿಗಳನ್ನು ಇಲಾಖೆಯ ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸುವ ಮೂಲಕ ಬಾಡಿಗೆ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶ.

ಇದರ ಜೊತೆಗೆ, ₹108 ಕೋಟಿ ವೆಚ್ಚದಲ್ಲಿ ಶಿಥಿಲಗೊಂಡಿರುವ 50 ಅಂಚೆ ಕಟ್ಟಡಗಳನ್ನು ಕೆಡವಿ ಮರುನಿರ್ಮಾಣ ಮಾಡಲಾಗುತ್ತದೆ. ಹಳೆಯ ಕಟ್ಟಡಗಳ ಸುರಕ್ಷತೆ ಮತ್ತು ದೀರ್ಘಕಾಲಿಕ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ.

2,550 ಉಪ ಅಂಚೆ ಕಚೇರಿಗಳಿಗೆ ಹೊಸ ರೂಪ : ಅಂಚೆ ಕಚೇರಿಗಳ ಸೇವಾ ವಾತಾವರಣ ಮತ್ತು ಗ್ರಾಹಕರ ಅನುಭವವನ್ನು ಸುಧಾರಿಸಲು ₹318 ಕೋಟಿ ವೆಚ್ಚದಲ್ಲಿ 2,550 ಇಲಾಖಾ ಉಪ ಅಂಚೆ ಕಚೇರಿಗಳ ನವೀಕರಣ ಹಾಗೂ ಏಕರೂಪದ ಬ್ರ್ಯಾಂಡಿಂಗ್ ಕೈಗೊಳ್ಳಲಾಗುತ್ತದೆ.

ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 2,500 ಅಂಚೆ ಕಚೇರಿಗಳಿಗೂ ₹37.50 ಕೋಟಿ ವೆಚ್ಚದಲ್ಲಿ ನವೀಕರಣ ಮತ್ತು ಬ್ರ್ಯಾಂಡಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳ ಹೊರನೋಟ, ಗುರುತಿನ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಸುಧಾರಣೆ ನಿರೀಕ್ಷಿಸಲಾಗಿದೆ.

ಐತಿಹಾಸಿಕ ಅಂಚೆ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ : ಭಾರತದ ಅಂಚೆ ಇಲಾಖೆಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ₹180 ಕೋಟಿ ವೆಚ್ಚದಲ್ಲಿ 20 ಪ್ರಮುಖ ಐತಿಹಾಸಿಕ ಅಂಚೆ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಿ ಸಂರಕ್ಷಿಸಲು ಯೋಜಿಸಲಾಗಿದೆ.

ಅಂಚೆ ಇಲಾಖೆಯ ಸಿಬ್ಬಂದಿಯ ವಸತಿ ಸೌಲಭ್ಯಗಳ ಸುಧಾರಣೆಯ ಭಾಗವಾಗಿ, ಹೆಚ್ಚಿನ ಬೇಡಿಕೆಯಿರುವ 150 ವಸತಿ ಕಾಲೊನಿಗಳ ನವೀಕರಣಕ್ಕೆ ₹357.50 ಕೋಟಿ ಮೀಸಲಿಡಲಾಗಿದೆ. ಇದರಿಂದ ಸಿಬ್ಬಂದಿಯ ವಾಸಸ್ಥಳಗಳ ಮೂಲಭೂತ ಸೌಕರ್ಯ ಮತ್ತು ಜೀವನಮಟ್ಟ ಸುಧಾರಿಸುವ ನಿರೀಕ್ಷೆಯಿದೆ.

ಸೌರಶಕ್ತಿ, ಮಳೆನೀರು ಸಂಗ್ರಹ ಮತ್ತು ಅಂಗವಿಕಲ ಸ್ನೇಹಿ ಸೌಲಭ್ಯ : ಯೋಜನೆಯಡಿ ₹100 ಕೋಟಿ ವೆಚ್ಚದಲ್ಲಿ ಸೌರಶಕ್ತಿ ವ್ಯವಸ್ಥೆ, ಮಳೆನೀರು ಸಂಗ್ರಹಣೆ, ರ್ಯಾಂಪ್‌ಗಳು, ಬ್ರೈಲ್ ಫಲಕಗಳು ಸೇರಿದಂತೆ ಸುಲಭ ಪ್ರವೇಶ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಮಹಿಳೆಯರಿಗಾಗಿ ಶೌಚಾಲಯಗಳು ಮತ್ತು ಶಿಶುಗಳಿಗೆ ಹಾಲುಣಿಸುವ ಕೊಠಡಿಗಳಂತಹ ಅಗತ್ಯ ಸೌಲಭ್ಯಗಳನ್ನೂ ಅಂಚೆ ಕಚೇರಿಗಳಲ್ಲಿ ಕಲ್ಪಿಸುವ ಉದ್ದೇಶವಿದೆ.

ಬೆಂಗಳೂರಿನ ತಂತ್ರಜ್ಞಾನ ಕೇಂದ್ರಕ್ಕೆ ₹100 ಕೋಟಿ ಅನುದಾನ : ಬೆಂಗಳೂರಿನಲ್ಲಿ ಅಂಚೆ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ (Centre for Excellence in Postal Technology – CEPT)ಕ್ಕೆ ಶಾಶ್ವತ ಕಟ್ಟಡ ನಿರ್ಮಿಸಲು ₹100 ಕೋಟಿ ಮೀಸಲಿಡಲಾಗಿದೆ. ಈ ಕೇಂದ್ರವು ಅಂಚೆ ಇಲಾಖೆಯ ಸುಧಾರಿತ ತಂತ್ರಜ್ಞಾನ ಸೇವೆಗಳು ಮತ್ತು ಸ್ವದೇಶಿ ತಂತ್ರಜ್ಞಾನ ವ್ಯವಸ್ಥೆಗಳ ಅಭಿವೃದ್ಧಿಗೆ ನೆರವಾಗಲಿದೆ.

ಗ್ರಾಮೀಣ ಅಂಚೆ ಸೇವೆಗಳಿಗೆ ಬಲ : ಭಾರತದಲ್ಲಿ ಸುಮಾರು 1.65 ಲಕ್ಷ ಅಂಚೆ ಕಚೇರಿಗಳ ಜಾಲವಿದ್ದು, ಅವುಗಳಲ್ಲಿ 1,49,385 ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಂಚೆ ಸೇವೆಗಳ ಜೊತೆಗೆ ಅಂಚೆ ಉಳಿತಾಯ, ಬ್ಯಾಂಕಿಂಗ್, ವಿಮೆ, ಆಧಾರ್ ಸೇವೆಗಳು ಮತ್ತು ಪಾಸ್‌ಪೋರ್ಟ್ ಸೇವೆಗಳಂತಹ ಹಲವು ಸಾರ್ವಜನಿಕ ಸೇವೆಗಳನ್ನು ಈ ಜಾಲ ಒದಗಿಸುತ್ತಿದೆ.

ಹೀಗಾಗಿ ಕಟ್ಟಡಗಳ ನವೀಕರಣ ಮತ್ತು ತಂತ್ರಜ್ಞಾನ ಅಭಿವೃದ್ಧಿ ಗ್ರಾಮೀಣ ಜನರಿಗೆ ಸೇವೆಗಳನ್ನು ಹೆಚ್ಚು ಸುಲಭವಾಗಿ ತಲುಪಿಸಲು ಸಹಕಾರಿಯಾಗಲಿದೆ. ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ಗುರಿಗಳಿಗೆ ಪೂರಕವಾಗಿ ಅಂಚೆ ಇಲಾಖೆಯ ಮೂಲಸೌಕರ್ಯವನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.