BBK13: ಬಿಗ್ ಬಾಸ್ ಕನ್ನಡ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರಂಗು ಮತ್ತು ಸ್ಪರ್ಧಿಗಳ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿದ್ದು, ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಈ ವಾರ ಬಿಗ್ ಬಾಸ್ ಮನೆಯನ್ನು ‘ಕಾಡು’ ಆಗಿ ಪರಿವರ್ತಿಸಿದ್ದು, ಪ್ರಾಣಿಗಳ ಗುಣಲಕ್ಷಣಗಳಿಗೆ ಹೋಲಿಸಿ ಆರದ ಗಾಯ, ದ್ರೋಹ, ಗುಳ್ಳೆನರಿ ಹಾಗೂ ಕಾಗೆ ಎಂಬ ವಿಶೇಷ ಟಾಸ್ಕ್ಗಳನ್ನು ನೀಡಿದ್ದಾರೆ. ಈಗಾಗಲೇ ‘ಆರದ ಗಾಯ’ ಅಧಿಕಾರ ಪಡೆದಿದ್ದ ಗಗನ್ ಚಿನ್ನಪ್ಪ ಅವರು ಯಶಸ್ ಅವರನ್ನು ಸೀಸನ್ ಕೊನೆಯವರೆಗೂ ನಾಮಿನೇಟ್ ಮಾಡಿದ್ದರೆ, ಯಶಸ್ ಅವರಿಗೆ ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್ ನೀಡಲಾಗಿದೆ. ಇತ್ತ ಧನುಷ್ ‘ಜೋಕರ್ ಕಾರ್ಡ್’ ಪಡೆದುಕೊಂಡಿದ್ದು, ಅಂತಿಮವಾಗಿ ಯಶಸ್, ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ ಹಾಗೂ ಜಗದೀಶ್ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ.
ಈ ನಡುವೆ ಟಾಸ್ಕ್ ಒಂದರಲ್ಲಿ ಆಸಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು, ಮನೆಯ ಇತರ ಸದಸ್ಯರು ಆಸಿಯಾ ಅವರೇ ‘ಗುಳ್ಳೆನರಿ’ ಎಂದು ಅನುಮಾನಿಸುತ್ತಿದ್ದಾರೆ. ಸಹ ಸ್ಪರ್ಧಿಗಳ ಈ ಊಹೆ ಮತ್ತು ಟಾಸ್ಕ್ನಲ್ಲಿ ಸರಿಯಾಗಿ ಆಡಲು ಸಾಧ್ಯವಾಗದ ಒತ್ತಡದಿಂದ ಆಸಿಯಾ ತೀವ್ರವಾಗಿ ಕುಗ್ಗಿಹೋಗಿದ್ದಾರೆ. ಯಶಸ್ ಬಳಿ ತಮ್ಮ ನೋವು ತೋಡಿಕೊಂಡ ಅವರು, “ನಾನು ಮನೆಗೆ ಹೋಗುತ್ತೇನೆ, ಇಲ್ಲಿರಲು ಆಗುತ್ತಿಲ್ಲ. ನಿಜವಾಗಲೂ ನನ್ನಿಂದ ಆಟ ಆಡಲು ಸಾಧ್ಯವಾಗುತ್ತಿಲ್ಲ, ಎಷ್ಟೇ ಶಕ್ತಿ ಹಾಕಿ ಆಡಿದರೂ ಏನೂ ಆಗುತ್ತಿಲ್ಲ” ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಚೇಂಜಿಂಗ್ ರೂಮ್ನಲ್ಲಿಯೂ ತಮ್ಮ ಮನೆಯವರನ್ನು ನೆನೆದು ಆಸಿಯಾ ಭಾವುಕರಾಗಿ ಅತ್ತಿದ್ದಾರೆ. ಆಸಿಯಾ ಅವರ ಈ ಹಠಾತ್ ನಡೆ ವೀಕ್ಷಕರಲ್ಲೂ ಅಚ್ಚರಿ ಮೂಡಿಸಿದ್ದು, ಮಾನಸಿಕವಾಗಿ ಕುಗ್ಗಿರುವ ಅವರು ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಹೊರನಡೆಯುತ್ತಾರಾ ಅಥವಾ ಮತ್ತೆ ಪುಟಿದೇಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.






















