SK Home Ad
Home ಸಿನಿ ಮಿಲ್ಸ್ ಮನೆಯೊಳಗೆ ‘ಗುಳ್ಳೆನರಿ’: ಬಿಗ್‌ ಬಾಸ್ ಟ್ವಿಸ್ಟ್; ನಾಮಿನೇಷನ್ ಸ್ಥಾನ ಅದಲು-ಬದಲು ಸಾಧ್ಯತೆ!

ಮನೆಯೊಳಗೆ ‘ಗುಳ್ಳೆನರಿ’: ಬಿಗ್‌ ಬಾಸ್ ಟ್ವಿಸ್ಟ್; ನಾಮಿನೇಷನ್ ಸ್ಥಾನ ಅದಲು-ಬದಲು ಸಾಧ್ಯತೆ!

0
7

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ 12ನೇ ವಾರದ ಟಾಸ್ಕ್‌ಗೆ ಮನೆಯೊಳಗೆ ಭರ್ಜರಿ ಸಿದ್ಧತೆ ನಡೆದಿದ್ದು, ಬಿಗ್ ಬಾಸ್ ಹೊಸದೊಂದು ರೋಚಕ ಟ್ವಿಸ್ಟ್ ನೀಡಿದ್ದಾರೆ. ಕಾಡಿನಲ್ಲಿ ಅಧಿಕಾರ ಪಡೆಯಲು ಚಾಣಾಕ್ಷತನ, ನಂಬಿಕೆಯ ಮುಖವಾಡ ಮತ್ತು ದ್ರೋಹದ ತಂತ್ರ ಬಳಸುವ ಪ್ರಾಣಿ ‘ಗುಳ್ಳೆನರಿ’ ಎಂದು ಉಲ್ಲೇಖಿಸಿದ ಬಿಗ್ ಬಾಸ್, ಅದೇ ಮಾದರಿಯ ಆಟವನ್ನು ಮನೆಯೊಳಗೆ ಆರಂಭಿಸಿದ್ದಾರೆ. ಈ ಸೀಕ್ರೆಟ್ ಪಾತ್ರಧಾರಿಯ ಪ್ರವೇಶದಿಂದ ಸ್ಪರ್ಧಿಗಳ ನಡುವೆ ಅನುಮಾನ ಮತ್ತು ಹೊಸ ಲೆಕ್ಕಾಚಾರಗಳು ಶುರುವಾಗಿವೆ.

ಈ ಟಾಸ್ಕ್‌ನಲ್ಲಿ ಬಿಗ್ ಬಾಸ್ ಸೀಕ್ರೆಟ್ ವ್ಯಕ್ತಿಯೊಬ್ಬರನ್ನು ‘ಗುಳ್ಳೆನರಿ’ಯಾಗಿ ನೇಮಕ ಮಾಡಿದ್ದು, ಟಾಸ್ಕ್ ಹಾಳು ಮಾಡುವ ಜವಾಬ್ದಾರಿ ಈ ವ್ಯಕ್ತಿಯ ಮೇಲಿದೆ. ತನ್ನ ತಂಡವನ್ನು ಸೋಲಿಸುವುದೇ ಈ ಗುಳ್ಳೆನರಿಗೆ ಸಿಕ್ಕ ಮೊದಲ ಸವಾಲಾಗಿದ್ದು, ಯಾರಿಗೂ ಗೊತ್ತಾಗದಂತೆ ಒಳಗೊಳಗೇ ತಂತ್ರ ರೂಪಿಸುವುದು ಸ್ಪರ್ಧಿಗೆ ದೊಡ್ಡ ಪರೀಕ್ಷೆಯಾಗಿದೆ. ಇಲ್ಲಿ ಶಕ್ತಿಗಿಂತ ತಂತ್ರಗಾರಿಕೆ ಮತ್ತು ನಟನೆ ಮುಖ್ಯವಾಗಿದ್ದು, ಗುಳ್ಳೆನರಿಯ ಮುಖವಾಡ ಧರಿಸಿದ ಆ ಸೀಕ್ರೆಟ್ ಸ್ಪರ್ಧಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಮತ್ತೊಂದೆಡೆ, ಈಗಾಗಲೇ ಮಹಾರಾಣಿ ಗಾನವಿ ಗೌಡ ಅವರು ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ, ಜಗದೀಶ್ ಮತ್ತು ಪ್ರಶಾಂತ್ ಅವರನ್ನು ನಾಮಿನೇಷನ್ ಜಾಗದಲ್ಲಿ ಇರಿಸಿದ್ದಾರೆ. ನೇರವಾಗಿ ನಾಮಿನೇಟ್ ಆಗಿರುವ ಯಶಸ್ ಕೃಷ್ಣ ಅವರನ್ನು ಹೊರತುಪಡಿಸಿ, ಉಳಿದವರ ನಾಮಿನೇಷನ್ ಸ್ಥಾನಗಳು ಅದಲು-ಬದಲು ಆಗುವ ಸಾಧ್ಯತೆ ಇದೆ. ಗುಳ್ಳೆನರಿಯ ಆಟ ಮತ್ತು ನಾಮಿನೇಷನ್ ರಹಸ್ಯ ಇಂದಿನ ಸಂಚಿಕೆಯಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.