SK Home Ad
Home ಸಿನಿ ಮಿಲ್ಸ್ ಮಿಸ್ ಯೂನಿವರ್ಸ್ 2026: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಮುಡಿಗೆ ವಿಶ್ವ ಸುಂದರಿ ಕಿರೀಟ; ಟಾಪ್...

ಮಿಸ್ ಯೂನಿವರ್ಸ್ 2026: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಮುಡಿಗೆ ವಿಶ್ವ ಸುಂದರಿ ಕಿರೀಟ; ಟಾಪ್ 30ಕ್ಕೆ ತೃಪ್ತಿಪಟ್ಟ ಭಾರತ!

0
34

ಪ್ರತಿಷ್ಠಿತ 75ನೇ ಆವೃತ್ತಿಯ ‘ಮಿಸ್ ಯೂನಿವರ್ಸ್ 2026’ (ವಿಶ್ವ ಸುಂದರಿ) ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ವಿಜೇತರಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ತವರು ನೆಲದಲ್ಲೇ ನಡೆದ ಈ ಭವ್ಯ ಸಮಾರಂಭದಲ್ಲಿ ಜೆನ್ನಿಫರ್ ಜಯಭೇರಿ ಬಾರಿಸಿದ್ದು, ಡೊಮಿನಿಕನ್ ರಿಪಬ್ಲಿಕ್ ರನ್ನರ್-ಅಪ್ ಸ್ಥಾನ ಪಡೆದರೆ, ವೆನೆಜುವೆಲಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಈ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಕಜಿಯಾ ಲಿಜ್ ಮೆಜೊ ಉತ್ತಮ ಪ್ರದರ್ಶನ ನೀಡಿ ಟಾಪ್ 30 ಸುತ್ತಿಗೆ ಪ್ರವೇಶ ಪಡೆದಿದ್ದರು. ಆದರೆ, ಟಾಪ್ 12 ಸುತ್ತಿಗೂ ಮುನ್ನವೇ ಸ್ಪರ್ಧೆಯಿಂದ ಹೊರಬೀಳುವ ಮೂಲಕ ಭಾರತೀಯರಿಗೆ ನಿರಾಸೆ ಮೂಡಿಸಿದ್ದಾರೆ. 2021ರಲ್ಲಿ ಹರ್ನಾಜ್ ಸಂಧು ಕಿರೀಟ ಗೆದ್ದ ನಂತರ ಭಾರತ ಈ ಪ್ರಶಸ್ತಿಗಾಗಿ ಕಾಯುತ್ತಿರುವ ಐದನೇ ವರ್ಷ ಇದಾಗಿದೆ. ಇದಕ್ಕೂ ಮೊದಲು 1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ಲಾರಾ ದತ್ತಾ ಭಾರತಕ್ಕೆ ವಿಶ್ವ ಸುಂದರಿ ಕಿರೀಟ ತಂದುಕೊಟ್ಟಿದ್ದರು.

ನೂತನ ವಿಶ್ವ ಸುಂದರಿ 27 ವರ್ಷದ ಜೆನ್ನಿಫರ್ ಬ್ಯಾರೆಟೊ ಕೇವಲ ಸೌಂದರ್ಯವತಿ ಮಾತ್ರವಲ್ಲ, ಉನ್ನತ ಶಿಕ್ಷಣ ಪಡೆದ ವೃತ್ತಿಪರರೂ ಹೌದು. ಸಂಶೋಧನಾ ಮನೋವಿಜ್ಞಾನದಲ್ಲಿ ಪದವಿ ಹಾಗೂ ಮನೋವಿಜ್ಞಾನ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್‌ನಲ್ಲಿ ಎರಡು ಸ್ನಾತಕೋತ್ತರ ಪದವಿ ಪಡೆದಿರುವ ಇವರು ‘ಪ್ರಿವೆನ್ಷನ್ ತಜ್ಞ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ರಲ್ಲಿ ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ವೃತ್ತಿ ಆರಂಭಿಸಿ, ಕೌಟುಂಬಿಕ ಹಿಂಸಾಚಾರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೊಳಗಾದ ಸೇನಾ ಕುಟುಂಬಗಳಿಗೆ ಆಸರೆಯಾಗಿದ್ದರು. ಅಲ್ಲದೆ, ವೈದ್ಯಕೀಯ ಕೇಂದ್ರ ಮತ್ತು ಮಕ್ಕಳ ಮಧುಮೇಹ ಸಂಘಟನೆಗಳಲ್ಲಿ ಸ್ವಯಂಸೇವಕಿಯಾಗಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.